ADVERTISEMENT

ಇಂದು ಬಿಜೆಪಿ ಕಚೇರಿಗೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 16:25 IST
Last Updated 13 ಆಗಸ್ಟ್ 2020, 16:25 IST

ಕೋಲಾರ: ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಡಿಯೋ ಸಂವಾದದ ಮೂಲಕ ಪಕ್ಷದ ಜಿಲ್ಲಾ ಕಚೇರಿ ಕಟ್ಟಡಕ್ಕೆ ಶುಕ್ರವಾರ (ಆ.14) ಶಿಲಾನ್ಯಾಸ ನೆರವೇರಿಸುತ್ತಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿಯು ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಪಕ್ಷವಾಗಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಸ್ವಂತ ಕಚೇರಿ ಆರಂಭಿಸಿ ಪಕ್ಷ ಸಂಘಟನೆ ಮಾಡಬೇಕು. ಶುಕ್ರವಾರ ರಾಜ್ಯದಲ್ಲಿ ಪಕ್ಷದ 8 ಜಿಲ್ಲಾ ಕಚೇರಿಗಳಿಗೆ ಶಿಲಾನ್ಯಾಸ ನಡೆಯಲಿದೆ’ ಎಂದರು.

‘ಜಿಲ್ಲೆಯಲ್ಲಿ ಪಕ್ಷದ ಸ್ವಂತ ಕಚೇರಿಗಾಗಿ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಕಾರ್ಯಕರ್ತರು ಸಹಕರಿಸಬೇಕು. ಪಕ್ಷದ ಸಭೆಗಳಿಗೆ ಸಭಾಂಗಣ, ಸಂಸದರು ಮತ್ತು ಶಾಸಕರು ಕಾರ್ಯಕರ್ತರ ಕುಂದು ಕೊರತೆ ಆಲಿಸಲು ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ. ಜತೆಗೆ ಪೂರ್ಣಾವಧಿ ಕಾರ್ಯಕರ್ತರ ವಾಸಕ್ಕೆ ಯೋಗ್ಯ ರೀತಿಯಲ್ಲಿ ಕಚೇರಿ ನಿರ್ಮಿಸಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಕೋವಿಡ್‌–19 ಭೀತಿ ಕಾರಣಕ್ಕೆ ಅಂತರ ಕಾಪಾಡುವ ಉದ್ದೇಶದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್‌ ಸದಸ್ಯ ವೈ.ಎನಾರಾಯಣಸ್ವಾಮಿ ಭಾಗವಹಿಸುತ್ತಾರೆ’ ಎಂದರು.

ಯೋಜಿತ ಕೃತ್ಯ: ‘ಬೆಂಗಳೂರು ಕಾಡುಗೊಂಡನಹಳ್ಳಿಯಲ್ಲಿ ನಡೆದ ಘಟನೆ ಪೂರ್ವ ಯೋಜಿತ ಕೃತ್ಯ. ಇದಕ್ಕೆ ಕುಮ್ಮಕ್ಕು ನೀಡಿದ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ ಒತ್ತಾಯಿಸಿದರು.

ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಮುಖಂಡರಾದ ವಿಜಯ್‌ಕುಮಾರ್‌, ಸುರೇಶ್, ನಾರಾಯಣ, ತಿಮ್ಮರಾಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.