ADVERTISEMENT

Tomato | ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಬಾಕ್ಸ್‌ ಕಳ್ಳತನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 13:07 IST
Last Updated 25 ಜುಲೈ 2023, 13:07 IST
   

ಕೋಲಾರ: ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಯಲ್ಲಿ ಟೊಮೆಟೊ ಬಾಕ್ಸ್‌ಗಳ ಕಳ್ಳತನ ನಡೆದಿದೆ.

ಎಪಿಎಂಸಿಯ ಸಿಕೆಎನ್‌ ಮಂಡಿಯಿಂದ ಇಬ್ಬರು ವ್ಯಕ್ತಿಗಳು ಬಾಕ್ಸ್‌ಗಳನ್ನು ಕದ್ದೊಯ್ಯುತ್ತಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐವಿಆರ್‌ಒನ್ ಎಂಬ ಮಂಡಿಯಿಂದಲೂ ಸೋಮವಾರ ಮಧ್ಯರಾತ್ರಿ ಬಾಕ್ಸ್‌ ಕದಿಯಲಾಗಿದೆ.

‘ಟೊಮೆಟೊ ಬಾಕ್ಸ್‌ ಕಳ್ಳತನವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಟೊಮೆಟೊಗೆ ಕಾವಲು ನೀಡಬೇಕಾಗಿರುವುದು ಮಂಡಿ ಮಾಲೀಕರ ಜವಾಬ್ದಾರಿ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇದ್ದು, ಎಲ್ಲಾ ಮಂಡಿಗಳಿಗೆ ರಕ್ಷಣೆ ಕೊಡುವುದು ಕಷ್ಟ. ಗಲಾಟೆ ಆಗದಂತೆ ಸುಗಮವಾಗಿ ಹರಾಜು ನಡೆಸುವುದು ನಮ್ಮ ಜವಾಬ್ದಾರಿ’ ಎಂದು ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈ ಮಧ್ಯೆ ಟೊಮೆಟೊ ದರ ಇಳಿಯುವ ಲಕ್ಷಣ ಕಾಣಿಸುತ್ತಿಲ್ಲ. ಮಳೆಯ ಕಾರಣ ಎಪಿಎಂಸಿಗೆ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಆವಕವಾಗುತ್ತಿದೆ.

ಮಂಗಳವಾರ ಹರಾಜಿನಲ್ಲಿ 15 ಕೆ.ಜಿಯ ಟೊಮೆಟೊ ಬಾಕ್ಸ್‌ ಮತ್ತೆ ₹ 2,200ಕ್ಕೆ ಮಾರಾಟವಾಗಿದೆ. ಕೆ.ಆರ್‌.ಸುಧಾಕರಗೌಡ ಎಂಬುವರ ಮಂಡಿಯಲ್ಲಿ ಬೇತಮಂಗಲದ ಗುಪ್ತ ಎಂಬ ಬೆಳೆಗಾರರು ತಂದಿದ್ದ ಟೊಮೆಟೊ ಈ ಬೆಲೆಗೆ ಮಾರಾಟವಾಗಿದೆ. ಅವರು 213 ಬಾಕ್ಸ್‌ ಟೊಮೊಟೊ ತಂದಿದ್ದರು.

ಎಪಿಎಂಸಿಗೆ ಒಟ್ಟು 8,168 ಕ್ವಿಂಟಲ್‌ ಅಂದರೆ 54,459 ಬಾಕ್ಸ್‌ ಟೊಮೆಟೊ ಆವಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.