ಮುಳಬಾಗಿಲು: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಸಂಪೂರ್ಣವಾಗಿ ನೆಲಕಚ್ಚಿದ ಕಾರಣ ಟೊಮೆಟೊ ಹಣ್ಣುಗಳು ತೋಟಗಳಲ್ಲಿಯೇ ಕೊಳೆಯುತ್ತಾ ಬಿದ್ದಿವೆ.
ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾದ ಟೊಮೆಟೊಗೆ ಚೆನ್ನೈ ಹಾಗೂ ಎನ್.ವಡ್ಡಹಳ್ಳಿ ಮಾರುಕಟ್ಟೆಗಳು ಹತ್ತಿರದಲ್ಲಿರುವ ಕಾರಣ ಬಹುತೇಕ ರೈತರು ಟೊಮೆಟೊ ಬೆಳೆಯನ್ನೇ ಹೆಚ್ಚಾಗಿ ಬೆಳೆದಿದ್ದಾರೆ. ಹೀಗಾಗಿ ಸುಮಾರು 3-4 ಸಾವಿರ ಎಕರೆ ಪ್ರದೇಶದಲ್ಲಿ ಟೊಮೆಟೊ ಕೊಯ್ಲಿಗೆ ಬಂದಿವೆ. ಆದರೆ ಮಾರುಕಟ್ಟೆಯಲ್ಲಿ ಕೆಲ ತಿಂಗಳಿಂದ ಕುಸಿತ ಕಂಡ ಟೊಮೆಟೊ ಬೆಲೆ ಮೇಲೇಳುತ್ತಲೇ ಇಲ್ಲ. ಇದರಿಂದಾಗಿ ಈಗಾಗಲೇ ಕೊಯ್ಲಿಗೆ ಬಂದಿರುವ ಹಣ್ಣುಗಳನ್ನು ರೈತರು ತೋಟಗಳಲ್ಲಿಯೇ ಬಿಟ್ಟಿದ್ದು, ಯಾವ ತೋಟದಲ್ಲಿ ನೋಡಿದರೂ ಕೆಂಪು ಟೊಮೆಟೊ ಕಣ್ಣಿಗೆ ರಾಚುತ್ತಿವೆ.
ಒಂದು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಬೇಕಾದಲ್ಲಿ ಸಸಿ( ನಾರು), ಗೊಬ್ಬರ, ಔಷಧ, ಕೂಲಿ, ನೇಗಿಲು, ಕಡ್ಡಿಗಳು, ಟೈನು, ತಂಗೂಸಿ ಮತ್ತಿತರ ಎಲ್ಲ ಖರ್ಚು ಸೇರಿ ಕನಿಷ್ಠ ₹1.5 ಲಕ್ಷಕ್ಕೂ ಹೆಚ್ಚು ವೆಚ್ಚ ತಗುಲುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿ ಬೆಳೆದಿದ್ದರೂ ಮಾರುಕಟ್ಟೆಯಲ್ಲಿ 15 ಕೆಜಿಗಳ ಒಂದು ಬಾಕ್ಸ್ ಟೊಮೆಟೊ ಬೆಲೆ ಕೇವಲ ₹20 .
ತೋಟದಿಂದ ಟೊಮೆಟೊ ಕಿತ್ತಿ ಮಾರುಕಟ್ಟೆಗೆ ಸಾಗಿಸಿದ ಖರ್ಚೂ ಕೈಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಅನೇಕ ರೈತರು ಟೊಮೆಟೊವನ್ನು ತೋಟದಲ್ಲಿಯೇ ಬಿಟ್ಟಿದ್ದಾರೆ. ಪರಿಣಾಮವಾಗಿ ತೋಟದಲ್ಲಿಯೇ ನೆಲಕ್ಕೆ ಬಿದ್ದು ಟೊಮೆಟೊ ಹಾಳಾಗುತ್ತಿದೆ. ಜೀವನಾಧಾರಕ್ಕೆಂದು ಬೆಳೆದ ಬೆಳೆಗಳು ಮಣ್ಣುಪಾಲಾಗುತ್ತಿರುವುದನ್ನು ನೋಡುತ್ತ ರೈತರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ತಮಿಳುನಾಡಿನ ಚೆನ್ನೈ, ತಾಲ್ಲೂಕಿನ ಎನ್.ವಡ್ಡಹಳ್ಳಿ ಹಾಗೂ ಕೋಲಾರ ಎಪಿಎಂಸಿ ಮಾರುಕಟ್ಟೆಗಳಲ್ಲಿ ನೂರಾರು ಟೊಮೆಟೊ ಬಂಡಿಗಳು ಖಾಲಿ ಹೊಡೆಯುತ್ತಿವೆ.
ತಾಲ್ಲೂಕಿನ ಪೆರಮಾಕನಹಳ್ಳಿ, ಚಿನ್ನಹಳ್ಳಿ, ಕೆರಸಿಮಂಗಲ, ಮರವೇಮನೆ, ಮುಷ್ಟೂರು ಮತ್ತಿತರ ಕಡೆಗಳಲ್ಲಿ ನೂರಾರು ಎಕರೆಗಳಲ್ಲಿ ಟೊಮೆಟೊ ಹಣ್ಣನ್ನು ಕನಿಷ್ಠ ಸ್ಯಾಂಪಲ್ ಸಹ ಕೀಳದೆ ಬಿಟ್ಟಿದ್ದಾರೆ. ಇತ್ತೀಚೆಗೆ ಬಿದ್ದ ಭಾರೀ ಮಳೆಗೆ ತೋಟಗಳ ಕಾಲುವೆಗಳಲ್ಲಿ ಬಿದ್ದಿರುವ ಹಣ್ಣುಗಳು ಕೊಳೆತು ಮಳೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ.
ಟೊಮೆಟೊಗೆ ಉತ್ತಮ ಬೆಲೆ ಸಿಗಬಹುದು ಎಂದು 30 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದ್ದು ಫಸಲು ಸಮೃದ್ಧವಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದ ಕಾರಣ ಕೀಳದೆ ತೋಟದಲ್ಲೇ ಬಿಟ್ಟುಬಿಡಲಾಗಿದೆ. ಇದರಿಂದ ಸುಮಾರು ₹7 ಲಕ್ಷ ಸಾಲದ ಹೊರೆ ಬಿದ್ದಿದೆ.ಹೇಮಂತ್ ಎನ್.ವಡ್ಡಹಳ್ಳಿ, ರೈತ
ಎನ್.ವಡ್ಡಹಳ್ಳಿ ಮಾರುಕಟ್ಟೆಯಿಂದ ದೂರದ ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳ, ತೆಲಂಗಾಣ, ಮಹಾರಾಷ್ಟ್ರ, ಪುಣೆ ಮತ್ತಿತರ ಕಡೆಗೆ ಪಾರ್ಸಲ್ ಹೋಗುವ ಟೊಮೆಟೊ ಮಾತ್ರ ಮಾರಾಟವಾಗುತ್ತಿವೆ. ಉಳಿದಂತೆ ಹೆಚ್ಚಿನ ಟೊಮೆಟೊ ಮಾರುಕಟ್ಟೆಯಲ್ಲೇ ಉಳಿಯುತ್ತಿದೆ. ಮಾರಾಟವಾಗದೆ ಉಳಿಯುವ ಟೊಮೆಟೊಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಗೂ ಕೆಲವು ಕೆರೆಗಳಲ್ಲಿ ಸುರಿಯುವ ಪರಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷಗಳಲ್ಲಿ ಈ ಅವಧಿಯಲ್ಲಿ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿತ್ತು. ಅದನ್ನೇ ನಂಬಿ ಈ ಸಲವೂ ರೈತರು ಟೊಮೆಟೊ ಬೆಳೆದಿದ್ದಾರೆ. ಆದರೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಸರ್ಕಾರ ಟೊಮೆಟೊಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರನ್ನು ಉಳಿಸಬೇಕು.ಎನ್.ಆರ್.ಎಸ್.ಸತ್ಯಣ್ಣ, ಟೊಮೆಟೊ ಮಂಡಿ ಮಾಲಿಕರು
ಬೆಳೆದ ಟೊಮೆಟೊಗಳನ್ನು ಕೀಳಲೂ ಆಗದೇ, ಕಿತ್ತ ಮೇಲೂ ಮಾರುಕಟ್ಟೆಗೆ ಸಾಗಿಸಲೂ ಆಗದೆ, ಮಾರುಕಟ್ಟೆಗೆ ಸಾಗಿಸಿದ ಮೇಲೂ ಅಲ್ಲಿಯೇ ಉಳಿಯುವ ಟೊಮೆಟೊವನ್ನು ನಿರ್ವಹಿಸಲಾಗದೇ ರೈತರು ಕಂಗಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.