ADVERTISEMENT

ಸದನದಲ್ಲಿ ನಿಜ ಹೇಳಿದೆ: ಶಾಸಕ ಶ್ರೀನಿವಾಸಗೌಡ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:43 IST
Last Updated 20 ಜುಲೈ 2019, 14:43 IST
   

ಕೋಲಾರ: ‘ಬಿಜೆಪಿ ಶಾಸಕರು ರಾಜೀನಾಮೆ ನೀಡಲು ನನಗೆ ₹5 ಕೋಟಿ ನೀಡಿದ್ದ ಸಂಬಂಧ ಎಸಿಬಿ ವಿಚಾರಣೆ ವೇಳೆ ಅಧಿಕಾರಿಗಳ ಬಲವಂತಕ್ಕೆ ಮಣಿದು ಬೇರೆ ಹೇಳಿಕೆ ನೀಡಿದ್ದೆ. ಆದರೆ, ಬಿಜೆಪಿಯು ಮೈತ್ರಿ ಸರ್ಕಾರ ಕೆಡವಲು ಮುಂದಾಗಿರುವುದರಿಂದ ಈಗ ಸದನದಲ್ಲಿ ನಿಜ ಹೇಳಬೇಕಾಯಿತು’ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಸ್ಪಷ್ಟಪಡಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಸಿಬಿ ವಿಚಾರಣೆ ವೇಳೆ ಹೀಗೆಯೇ ಬರೆಯಿರಿ ಎಂದು ತಿಳಿಸಿದರೂ ಅಧಿಕಾರಿಗಳು ಯಾಕೆ ಸಾರ್, ಬಿಡಿ ಸಾರ್ ಎಂದು ಹೇಳಿಕೊಟ್ಟಿದ್ದರು. ಬಿಜೆಪಿ ಮುಖಂಡರು ಆಪರೇಷನ್‌ ಕಮಲದಿಂದ ಹಿಂದೆ ಸರಿದಿದ್ದರಿಂದ ಹಾಳಾಗಿ ಹೋಗ್ಲಿ ಎಂದು ನಾನು ಸುಮ್ಮನಾಗಿದ್ದೆ’ ಎಂದರು.

‘ಇದೀಗ ಬಿಜೆಪಿ ಮುಖಂಡರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 15 ಶಾಸಕರಿಗೆ ತಲಾ ₹ 30 ಕೋಟಿ ಕೊಟ್ಟು ಸರ್ಕಾರ ಕೆಡವಲು ಪ್ರಯತ್ನಿಸಿದ್ದರಿಂದ ಇರುವ ಸತ್ಯವನ್ನು ನೇರವಾಗಿ ಸದನದಲ್ಲಿ ಹೇಳಬೇಕಾಯಿತು’ ಎಂದು ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ADVERTISEMENT

‘ಪ್ರಕರಣ ಸಂಬಂಧ ಎಸಿಬಿ ಡಿವೈಎಸ್ಪಿ ಜತೆ ಮಾತನಾಡಿದಾಗ ಅವರು ಹೌದು ಸಾರ್, ಆ ದಿನ ಪ್ರಕರಣ ದೊಡ್ಡದು ಮಾಡುವುದು ಬೇಡವೆಂದು ತಾವೇ ಹೇಳಿಕೊಟ್ವಿ. ಆದರೆ, ಈಗ ಹೀಗೆ ಆಗ್ತಿದೆ ಎಂದು ಹೇಳುತ್ತಿದ್ದಾರೆ’ ಎಂದು ಎಸಿಬಿ ಡಿವೈಎಸ್ಪಿ ಜತೆಗಿನ ಮೊಬೈಲ್‌ ಕರೆಯ ವಿವರವನ್ನು ಸಾಕ್ಷಿಯಾಗಿ ಪ್ರದರ್ಶಿಸಿದರು.

‘ನಾನು ಸಿ.ಬೈರೇಗೌಡರ ಶಿಷ್ಯ. ಸುಳ್ಳು ಹೇಳುವ ಅಗತ್ಯ ಹಾಗೂ ಅವಶ್ಯಕತೆ ನನಗಿಲ್ಲ. ತಾಲ್ಲೂಕು ಬೋರ್ಡ್‌ನಿಂದ ಬಂದು ಇಷ್ಟು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಸದನದಲ್ಲಿ ನಾನು ಹೇಳಿದ್ದು ಸತ್ಯ. ನನ್ನ ವಿರುದ್ದ ಬಿಜೆಪಿ ಶಾಸಕ ವಿಶ್ವನಾಥ್ ಹಕ್ಕುಚ್ಯುತಿ ಮಂಡಿಸಿದರೆ ಅದಕ್ಕೆ ಸದನದಲ್ಲೇ ಉತ್ತರಿಸುತ್ತೇನೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.