ADVERTISEMENT

ಕೋಲಾರ: ಕ್ಷಯಮುಕ್ತ ಕೋಲಾರಕ್ಕಾಗಿ ಪಣ

‘ನೂರು ದಿನಗಳ ಜಾಗೃತಿ ಅಭಿಯಾನ’ಕ್ಕೆ ಗಣ್ಯರು ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 15:49 IST
Last Updated 8 ಡಿಸೆಂಬರ್ 2024, 15:49 IST
ಕೋಲಾರದಲ್ಲಿ ಜಾಗೃತಿ ಅಭಿಯಾನದ ಪೋಸ್ಟರ್‌ ಅನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್. ಹೊಸಮನಿ ಬಿಡುಗಡೆ ಮಾಡಿದರು
ಕೋಲಾರದಲ್ಲಿ ಜಾಗೃತಿ ಅಭಿಯಾನದ ಪೋಸ್ಟರ್‌ ಅನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್. ಹೊಸಮನಿ ಬಿಡುಗಡೆ ಮಾಡಿದರು   

ಕೋಲಾರ: ಕ್ಷಯ ರೋಗ (ಟಿಬಿ) ಮುಕ್ತ ಕೋಲಾರ ಜಿಲ್ಲೆಗಾಗಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿರುವ ‘ನೂರು ದಿನಗಳ ಜಾಗೃತಿ ಅಭಿಯಾನ’ಕ್ಕೆ ಗಣ್ಯರು ಚಾಲನೆ ನೀಡಿದರು.

ನಗರದ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ನಡೆದ ‘ಆರೋಗ್ಯದ ಬಗ್ಗೆ ಇರಲಿ ಗಮನ- ಟಿ.ಬಿ ಮುಕ್ತ ಭಾರತ ಅಭಿಯಾನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿ.ಬಿಯ ಪರಿಣಾಮ, ತಡೆಗಟ್ಟುವುದು, ಲಭ್ಯವಿರುವ ಚಿಕಿತ್ಸೆಯನ್ನು ತಿಳಿಸಿಕೊಡಲಾಯಿತು. ಮುಂದಿನ 100 ದಿನಗಳಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವ ಶಪಥವನ್ನೂ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ‌ ಸುನಿಲ್ ಎಸ್. ಹೊಸಮನಿ, ‘ಜಿಲ್ಲೆಯನ್ನು ಕ್ಷಯರೋಗ ಮುಕ್ತಗೊಳಿಸಲು ಎರಡು ವರ್ಷಗಳಿಂದಲೂ ಸತತ ಪ್ರಯತ್ನ ಮಾಡುತ್ತಿದ್ದೇವೆ. ಆದರೂ ರೋಗಿಗಳು ಕಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಮುಂದಿನ ನೂರು ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯೊಂದಿಗೆ ಸಂಬಂಧಿಸಿದ ಇಲಾಖೆಗಳು ಕೂಡ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ತಪಾಸಣೆಗೆ ಬೇಕಾದ ಸಾಧನಗಳ ಸಂಖ್ಯೆಯನ್ನು ಜಿಲ್ಲೆಯಲ್ಲಿ ಹೆಚ್ಚಿಸಲಾಗಿದೆ. ಇದನ್ನು ಬಳಸಿಕೊಂಡು ತ್ವರಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಬೇಕು. ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ ತಪಾಸಣೆ ನಡೆಸಬೇಕು’ ಎಂದರು.

‘ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಇದಾಗಿರುವುದರಿಂದ ಚಿಕಿತ್ಸೆ ನೀಡಿ ಹರಡದಂತೆ ನೋಡಿಕೊಳ್ಳಬೇಕು. 3–4 ವಾರಗಳಿಗೂ ಹೆಚ್ಚು ಕಾಲದಿಂದ ಕೆಮ್ಮು ಇದ್ದರೆ ಅದು ಕ್ಷಯ ಆಗಿರಬಹುದು. ಆದ್ದರಿಂದ ಆರಂಭಿಕ ಹಂತದಲ್ಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಾಯಿಲೆ ಇದ್ದವರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಪರೀಕ್ಷೆಯೂ ಉಚಿತವಿದೆ. ರೋಗ ಪತ್ತೆ ಹಚ್ಚುವ ಖಾಸಗಿ ವೈದ್ಯರಿಗೆ ₹ 500 ಪ್ರೋತ್ಸಾಹಧನ ನೀಡಲಾಗುವುದು. ಚಿಕಿತ್ಸೆಯ ಅವಧಿಯಲ್ಲಿ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ ₹ 1000 ಕೊಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್‌, ‘2005-06ರಿಂದ ಒಂದು ಲಕ್ಷಕ್ಕೆ 204 ಕ್ಷಯ ರೋಗದ ಪ್ರಕರಣ ಪತ್ತೆ ಹಚ್ಚುತ್ತಿದ್ದೆವು. ಈಗ ಅಂತಹ ರೋಗಿಗಳ ಪ್ರಮಾಣವನ್ನು 50ಕ್ಕಿಂತ ಕಡಿಮೆಗೆ ತರಬೇಕು, ಶೂನ್ಯಕ್ಕೆ ತಂದು ದೇಶವನ್ನು ಟಿ.ಬಿ ಮುಕ್ತ ಮಾಡಬೇಕೆಂಬ ಗುರಿ ಹೊಂದಲಾಗಿದೆ. ಈ ನೂರು ದಿನಗಳ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು’ ಎಂದರು.

‘ಎರಡು ವರ್ಷಗಳಲ್ಲಿ ಒಂದೂ ‍ಪ್ರಕರಣ ವರದಿ ಆಗದಿದ್ದರೆ ಆ ಗ್ರಾಮ ಪಂಚಾಯಿತಿಯನ್ನು ಟಿ.ಬಿ ಮುಕ್ತ ಎಂದು ಘೋಷಿಸಲಾಗುವುದು. ಈಗಾಗಲೇ ಪತ್ತೆಯಾದ ಪ್ರದೇಶಗಳಲ್ಲಿ ಚಿಕಿತ್ಸೆ ಪಡೆದವರನ್ನು ಟಿ.ಬಿ ಚಾಂಪಿಯನ್ಸ್ ಎಂದು ಮಾಡಿ ಜಾಗೃತಿ ಮೂಡಿಸಬೇಕು. ಬಿಟ್ಟು ಹೋದವರನ್ನು ಚಿಕಿತ್ಸೆಯ ವ್ಯಾಪ್ತಿಗೆ ತರಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 1,202 ಪ್ರಕರಣ ಪತ್ತೆ ಹಚ್ಚಬೇಕು ಎಂದು ಗುರಿ ನೀಡಲಾಗಿತ್ತು. ಉಳಿದದ್ದನ್ನು ಈ 100 ದಿನಗಳಲ್ಲಿ ಮಾಡಬೇಕು. ಎಲ್ಲ ಗ್ರಾಮಗಳಿಗೂ ಕಡ್ಡಾಯವಾಗಿ ಭೇಟಿ ನೀಡಬೇಕು. ರೋಗಿಗಳನ್ನು ಪತ್ತೆ ಹಚ್ಚಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಬೇಕು’ ಎಂದರು.

ಒಬ್ಬರಿಂದ 40 ಮಂದಿಗೆ ಹರಡುತ್ತದೆ: ಜಿಲ್ಲಾ ಕ್ಷಯರೋಗ ನಿವಾರಣಾ ನೋಡಲ್ ಅಧಿಕಾರಿ ಡಾ.ಪ್ರಸನ್ನ ಕುಮಾರ್ ಮಾತನಾಡಿ, ರೋಗಿಯೊಬ್ಬರಿಂದ ಸುತ್ತಮುತ್ತಲಿನ 40 ಮಂದಿಗೆ ಹರಡುವ ರೋಗ ಇದಾಗಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

‘ನಿಯಮಿತವಾಗಿ ಮಾತ್ರೆ ಸೇವಿಸುವಂತೆ ಮಾಡುವ ಸವಾಲೂ ನಮ್ಮ ಮುಂದಿದೆ. ಕ್ಷೇತ್ರ ಮಟ್ಟದ ಸಿಬ್ಬಂದಿ ಈ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು’ ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ನಾರಾಯಣಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕಿ ಮಮತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಣಿ, ಎನ್.ಟಿ.ಇ.ಪಿ.ಬಿ ಸಿಬ್ಬಂದಿ ಅಮರೇಶ್, ಮದುಕೇಶ್, ಮಹೇಶ್, ವಿನಯಾ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.