ಬಂಧನ
(ಪ್ರಾತಿನಿಧಿಕ ಚಿತ್ರ)
ಶ್ರೀನಿವಾಸಪುರ: ಅಕ್ರಮ ಸಂಬಂಧ ಬಯಲಾಯಿತೆಂದು ಅತ್ತೆಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿದ್ದ ಆರೋಪದಲ್ಲಿ ಸೊಸೆ ಹಾಗೂ ಆತನ ಪ್ರಿಯಕರನನ್ನು ರಾಯಲ್ಪಾಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ತುಮ್ಮಲಪಲ್ಲಿಯಲ್ಲಿ ನಡೆದಿದ್ದು, ತನ್ನ ಪತಿ ಮನೆಯಲ್ಲಿ ಇಲ್ಲದಿದ್ದ ವೇಳೆ ಪ್ರಿಯಕರ ಶಶಿಕುಮಾರ್ ಎಂಬಾತನ ಜೊತೆ ಸೇರಿ ಹಲ್ಲೆ ನಡೆಸಿದ್ದಳು. ತಲೆಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದ ಅತ್ತೆ ರಮಣಮ್ಮ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಮಣಮ್ಮ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
‘7 ವರ್ಷಗಳ ಹಿಂದೆ ತುಮ್ಮಲಪಲ್ಲಿ ಗ್ರಾಮದ ಮಂಜುನಾಥ್ ರೆಡ್ಡಿ ಎಂಬುವರನ್ನು ಆಂಧ್ರಪ್ರದೇಶ ಮೂಲದ ಮಹಿಳೆ ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ಬಳಿಕ ತುಮ್ಮಲಪಲ್ಲಿ ಗ್ರಾಮದವನೇ ಆದ ಶಶಿಕುಮಾರ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಆಕೆಯ ಅತ್ತೆಗೆ ಗೊತ್ತಾಗಿತ್ತು. ಪ್ರಿಯಕರ ಕೊಡಿಸಿದ್ದ ಮೊಬೈಲ್ ಅನ್ನು ಯಾರಿಗೂ ಕಾಣದಂತೆ ಬಳಕೆ ಮಾಡುತ್ತಿದ್ದ ಸೊಸೆ, ಆ.31 ರಂದು ಅತ್ತೆಯ ಕೈಗೆ ಸಿಕ್ಕಿಬಿದ್ದಿದ್ದಳು. ಮಗನ ಸಂಸಾರದಲ್ಲಿ ಮೊಬೈಲ್‌ನಿಂದಲೇ ಪದೇಪದೇ ಗಲಾಟೆ ನಡೆಯುತ್ತಿದ್ದು, ಮೊಬೈಲ್ ಬಳಕೆ ಮಾಡದಂತೆ ಸೊಸೆಗೆ ರಮಣಮ್ಮ ಬುದ್ಧಿವಾದ ಹೇಳಿದ್ದರು. ಹೀಗಾಗಿ, ರಮಣಮ್ಮ ಅವರ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ಹಲ್ಲೆ ನಡೆಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ರಾಯಲ್ಪಾಡು ಠಾಣೆಯ ಪಿಎಸ್‌ಐ ರಾಮು ತನಿಖೆ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.