
ಚಿಕ್ಕತಿರುಪತಿ (ಮಾಲೂರು): ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿಗೆ ಕಲಿಕೆರೆ ಗ್ರಾಮದ ಮಾರಿಕಾಂಬ ಯುವಕರ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನಗಳನ್ನು ಮಂಗಳವಾರ ಹಸ್ತಾಂತರಿಸಿದರು.
ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿಯಲ್ಲಿ ಒಂದೇ ಒಂದು ಸ್ವಚ್ಛತಾ ವಾಹನವಿದ್ದು, ಕಸ ಸಂಗ್ರಹ ಕಷ್ಟವಾಗುತ್ತಿತ್ತು. ಇದನ್ನು ಅರಿತ ಮಾರಿಕಾಂಬ ಯುವಕರ ಸಂಘದ ಸದಸ್ಯರು ಎರಡು ವಾಹನಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಕಲಿಕೆರೆ ಪ್ರೇಮ್ ಕುಮಾರ್ ಮಾತನಾಡಿ, ಈಗಾಗಲೇ ಚಿಕ್ಕತಿರುಪತಿ ಗ್ರಾ.ಪಂ ವತಿಯಿಂದ ಚಿಕ್ಕತಿರುಪತಿ ಗ್ರಾಮದಲ್ಲಿ ಮಾತ್ರ ಕಸ ಸಂಗ್ರಹಿಸುತ್ತಿದ್ದಾರೆ. ಒಂದೇ ವಾಹನ ಇರುವುದರಿಂದ ಬೇರೆ ಗ್ರಾಮಗಳಲ್ಲಿ ಕಸ ಸಂಗ್ರಹಿಸಲು ಆಗುತ್ತಿರಲಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಸ್ವಚ್ಛತಾ ವಾಹನ ಹೋಗಿ ಕಸ ಸಂಗ್ರಹಣೆ ಮಾಡಿ, ಹಳ್ಳಿಗಳಲ್ಲಿ ಉತ್ತಮ ಆರೋಗ್ಯ ವಾತಾವರಣ ಸೃಷ್ಟಿಯಾಗಲಿ ಎಂಬ ಉದ್ದೇಶದಿಂದ ಎರಡು ಸ್ವಚ್ಛತಾ ವಾಹನಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದರು.
ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ಪ, ಚಿಕ್ಕತಿರುಪತಿ ಗ್ರಾಪಂ ಆಡಳಿತಾಧಿಕಾರಿ ಗೋವಿಂದೇಗೌಡ, ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಂದ್ರ ಗೋಪಾಲ್, ದ್ವಿತೀಯ ದರ್ಜೆ ಸಹಾಯಕ ನಾಗರಾಜಪ್ಪ, ಮಾಜಿ ಅಧ್ಯಕ್ಷ ಜಿವಿ. ಮಂಜುನಾಥ್, ಸದಸ್ಯ ರಾಜಶೇಖರ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ವೆಂಕಟೇಶ್, ಮಾದೇಶ್, ಪ್ರೇಮ, ಬಾಯಮ್ಮ, ನವೀನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.