ADVERTISEMENT

ಕೋಲಾರ: ಜಿಲ್ಲೆಯಲ್ಲಿ ಅನಗತ್ಯ ಅಲೆದಾಟ, ‘ದಂಡ’ದ ಅಸ್ತ್ರ ಪ್ರಯೋಗ

ಜಿಲ್ಲೆಯಲ್ಲಿ ಜನರ ನಿರ್ಲಕ್ಷ್ಯದ ನಡೆ: ಸೋಂಕು ಹರಡುವಿಕೆಗೆ ದಾರಿ

ಜೆ.ಆರ್.ಗಿರೀಶ್
Published 1 ಮೇ 2021, 19:30 IST
Last Updated 1 ಮೇ 2021, 19:30 IST
ಕೋಲಾರದಲ್ಲಿ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಬಂದು ಸುತ್ತಾಡುವ ಬೈಕ್‌ ಸವಾರರನ್ನು ಪೊಲೀಸರು ತಡೆದು ವಿಚಾರಣೆ ನಡೆಸುತ್ತಿರುವುದು.
ಕೋಲಾರದಲ್ಲಿ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಬಂದು ಸುತ್ತಾಡುವ ಬೈಕ್‌ ಸವಾರರನ್ನು ಪೊಲೀಸರು ತಡೆದು ವಿಚಾರಣೆ ನಡೆಸುತ್ತಿರುವುದು.   

ಕೋಲಾರ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಆದೇಶ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರುವ ಪೊಲೀಸರು ಅನಗತ್ಯವಾಗಿ ಮನೆಯಿಂದ ಹೊರಬಂದು ರಸ್ತೆಗಳಲ್ಲಿ ಅಲೆದಾಡುವ ವಾಹನ ಸವಾರರ ಮೇಲೆ ‘ದಂಡ’ದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.

ಲಾಕ್‌ಡೌನ್‌ ಆರಂಭದಲ್ಲಿ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಜನರ ಓಡಾಟಕ್ಕೆ ಹೆಚ್ಚು ನಿರ್ಬಂಧ ವಿಧಿಸಿರಲಿಲ್ಲ. ಆದರೆ, ಜನರು ಲಾಕ್‌ಡೌನ್‌ ಗಂಭೀರವಾಗಿ ಪರಿಗಣಿಸದೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದಾರೆ. ಇದು ಕೋವಿಡ್‌ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಲಾಕ್‌ಡೌನ್‌ ಮಾರ್ಗಸೂಚಿಯಂತೆ ಬೆಳಿಗ್ಗೆ 6 ಗಂಟೆಯಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಜನರು 10 ಗಂಟೆ ನಂತರವೂ ರಸ್ತೆಗಳಲ್ಲಿ ಓಡಾಡುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಯುವಕರು ಬೈಕ್‌ ಏರಿ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಔಷಧ ಮಾತ್ರೆ ಖರೀದಿ, ಆಸ್ಪತ್ರೆಗೆ ಹೋಗುವ ಸಬೂಬು ಹೇಳುತ್ತಾ ಮನೆಯಿಂದ ಹೊರ ಬಂದು ನಗರ ಸುತ್ತುತ್ತಿದ್ದಾರೆ.

ADVERTISEMENT

ಮತ್ತೆ ಕೆಲವರು ಅಗತ್ಯ ಸೇವೆಗಳ ನೆಪದಲ್ಲಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಹೊರ ಜಿಲ್ಲೆಗೆ ಮತ್ತು ಹೊರಗಿನಿಂದ ಜಿಲ್ಲೆಗೆ ಜನರ ಮಹಾ ವಲಸೆ ಹೆಚ್ಚುತ್ತಿದೆ. ಜನರ ಈ ನಿರ್ಲಕ್ಷ್ಯದ ನಡೆ ಸೋಂಕು ಹರಡುವಿಕೆಗೆ ದಾರಿ ಮಾಡಿಕೊಡುತ್ತಿದ್ದು, ಲಾಕ್‌ಡೌನ್‌ ಮತ್ತಷ್ಟು ಕಠಿಣಗೊಳಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ.

ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಪೊಲೀಸರು ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಬರುವ ಪ್ರತಿ ವಾಹನ ಸವಾರರನ್ನು ತಡೆದು ಪರಿಶೀಲನೆ ಮಾಡುತ್ತಿದ್ದಾರೆ. ಜಿಲ್ಲಾ ಕೇಂದ್ರದ ಹಲವೆಡೆ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಸವಾರರ ತಪಾಸಣೆ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳು ಮತ್ತು ಕೃಷಿ ಸಲಕರಣೆ ಸಾಗಣೆ, ರೈತರ ವಾಹನಗಳ ಓಡಾಟಕ್ಕೆ ವಿನಾಯಿತಿ ನೀಡಲಾಗಿದೆ.

ಸ್ಥಳದಲ್ಲೇ ಜಪ್ತಿ: ಲಾಕ್‌ಡೌನ್‌ ವೇಳೆ ಮನೆಯಿಂದ ಹೊರಬಂದಿರುವುದಕ್ಕೆ ಕಾರಣ, ಅದಕ್ಕೆ ಪೂರಕ ದಾಖಲೆಪತ್ರವನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಜನರು ಸೂಕ್ತ ಕಾರಣ ನೀಡದಿದ್ದರೆ ಅಥವಾ ದಾಖಲೆಪತ್ರ ತೋರಿಸದಿದ್ದರೆ ಸ್ಥಳದಲ್ಲೇ ಅವರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಕೆಲವೆಡೆ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸುತ್ತಿದ್ದಾರೆ.

ಮಾಸ್ಕ್‌ ಧರಿಸದಿರುವುದು ಮತ್ತು ಲಾಕ್‌ಡೌನ್‌ ಅವಧಿಯಲ್ಲಿ ಅನಗತ್ಯ ಓಡಾಟದ ಸಂಬಂಧ ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯೊಂದರಲ್ಲೇ ಶುಕ್ರವಾರದವರೆಗೆ (ಏ.30) 3,500 ಪ್ರಕರಣ ದಾಖಲಿಸಿ ವಾಹನಗಳನ್ನು ಜಪ್ತಿ ಮಾಡಲಾಗಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ 3,250 ಪ್ರಕರಣ ದಾಖಲಿಸಿ 200ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿ ಪ್ರಕರಣದಲ್ಲಿ ಸವಾರರಿಗೆ ₹ 100 ದಂಡ ವಿಧಿಸಲಾಗುತ್ತಿದೆ.

ಜಂಟಿ ಕಾರ್ಯಾಚರಣೆ: ಮತ್ತೊಂದೆಡೆ ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುವವರಿಗೆ ಮುಲಾಜಿಲ್ಲದೆ ದಂಡ ವಿಧಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದಿರುವುದು ಮತ್ತು ಅಂತರ ಪಾಲಿಸದಿರುವ ಸಂಬಂಧ ಅಧಿಕಾರಿಗಳು ಪ್ರಕರಣ ದಾಖಲಿಸಿ ದಂಡ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.