ADVERTISEMENT

ಅಡ್ಡಾದಿಡ್ಡಿ ಕಸ ವಿಲೇವಾರಿ

ಬೇತಮಂಗಲ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:17 IST
Last Updated 24 ಸೆಪ್ಟೆಂಬರ್ 2022, 5:17 IST
ಕಸದ ರಾಶಿಗೆ ಬೆಂಕಿ ಹಾಕಿರುವುದು
ಕಸದ ರಾಶಿಗೆ ಬೆಂಕಿ ಹಾಕಿರುವುದು   

ಬೇತಮಂಗಲ: ಬೇತಮಂಗಲ ಹೋಬಳಿ ಕೇಂದ್ರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ರಸ್ತೆ ಬಳಿಯೇ ಸುರಿಯುತ್ತಿರುವುದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.

ಬೇತಮಂಗಲ ಗ್ರಾಮದಲ್ಲಿ 8 ಬ್ಲಾಕ್‌ಗಳಿವೆ. ಈ ಬ್ಲಾಕ್‌ಗಳಲ್ಲಿ ಸಂಗ್ರಹವಾಗುವ ಕಸವನ್ನು ಬೇತಮಂಗಲ– ಕೆಜಿಎಫ್ ಮುಖ್ಯ ರಸ್ತೆಯ ಬಳಿ ಇರುವ ಗೋಸಿನ ಕೆರೆ ಸಮೀಪ ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯದ ರಾಶಿ ದಿನೇ ದಿನೇ ಬೆಳೆಯುತ್ತಿದೆ.

ಗ್ರಾಮ ಪಂಚಾಯತಿಯ ಈ ನಿರ್ಲಕ್ಷ್ಯ ನಡೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

ಇದರ ಸಮೀಪ ಇರುವ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ರೋಗಿಗಳು, ಪಕ್ಕದಲ್ಲಿರುವ ಗ್ರಾಮೀಣ ವಿದ್ಯಾಸಂಸ್ಥೆ ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅವರೆಲ್ಲರೂ ಮೂಗು ಮುಚ್ಚಿಕೊಂಡು
ಸಂಚರಿಸಬೇಕಿದೆ.

ನಾಯಿಗಳ ಕಾಟ: ತ್ಯಾಜ್ಯ ತಿನ್ನಲು ಇಲ್ಲಿ ಶ್ವಾನ ಪಡೆ ಸೇರಿರುತ್ತದೆ. ಇದರಿಂದ ಪಾದಚಾರಿಗಳು ಆತಂಕದಿಂದ ಓಡಾಡಬೇಕಿದೆ. ನಾಯಿಗಳ ಕಾಟಕ್ಕೆ ಆಗಾಗ್ಗೆ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿರುತ್ತವೆ. ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಈ ಸ್ಥಳ ಬಿಟ್ಟು ಬೇರೆ ಜಾಗದಲ್ಲಿ ಕಸ ವಿಲೇವಾರಿ ಮಾಡಬೇಕೆಂದು ಸ್ಥಳೀಯ ನಾಗರಿಕರ ಆಗ್ರಹ.

ಕೆರೆಗೂ ಆಪತ್ತು

ಕೆರೆ ಬಳಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಮುಂದೊಂದು ದಿನ ಕೆರೆಗೂ ಆಪ‍ತ್ತು ಉಂಟಾಗಲಿದೆ ಎನ್ನುತ್ತಾರೆ ಸಾರ್ವಜನಿಕರು. ಹೀಗೆ ತ್ಯಾಜ್ಯ ಸುರಿಯುತ್ತಿದ್ದರೆ ಕಸದ ರಾಶಿ ಮತ್ತು ವಿಲೇವಾರಿ ಜಾಗ ವಿಸ್ತರಣೆಗೊಂಡ ಕೆರೆಗೂ ಕಂಟಕ ಎದುರಾಗಲಿದೆ. ‌

ಹಲವು ದಿನಗಳಿಂದ ತ್ಯಾಜ್ಯ ಸುರಿಯುತ್ತಿರುವ ಕಾರಣ ಕಸದ ರಾಸಾಯನಿಕ ದ್ರವ ಇಂಗಿ ಕೆರೆ ಒಡಲು ಸೇರುತ್ತಿದೆ. ಇದರಿಂದ ಕೆರೆ ನೀರು ಮತ್ತು ಅಂತರ್ಜಲ ಕಲುಷಿತ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ
ಪರಿಸರವಾದಿಗಳು.

ವಾಯು ಮಾಲಿನ್ಯ: ವಿದ್ಯಾರ್ಥಿಗಳಿಗೆ ಕಿರಿಕಿರಿ

ತ್ಯಾಜ್ಯ ವಿಲೇವಾರಿ ಮಾಡುತ್ತಿರುವರಸ್ತೆ ಸಮೀಪವೇ ಶಾಲೆ. ತ್ಯಾಜ್ಯಕ್ಕೆ ಆಗಾಗ್ಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಹೆಚ್ಚು ವಾಯು ಮಾಲಿನ್ಯ ಉಂಟಾಗುತ್ತಿದೆ. ಪ್ಲಾಸ್ಟಿಕ್‌ ಸೇರಿದಂತೆ ತ್ಯಾಜ್ಯ ಉರಿದು ಹೊಮ್ಮುವ ಹೊಗೆ ಶಾಲಾ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮಕ್ಕಳು ತರಗತಿಯಲ್ಲಿ ಕುಳಿತು ಪಾಠ ಕೇಳಲು ಆಗುತ್ತಿಲ್ಲ. ಶಿಕ್ಷಕರಿಗೂ ಅಡಚಣೆ ಉಂಟಾಗುತ್ತಿದೆ ಎಂದು ಇಲ್ಲಿನ ಶಾಲಾ ಶಿಕ್ಷಕರು
ತಿಳಿಸಿದರು.

ಪ್ಲಾಸ್ಟಿಕ್‌ ಸೇರಿ ಇನ್ನಿತರ ತ್ಯಾಜ್ಯ ವಸ್ತು ಸುಡಿಯುವುದರ ಹೊಗೆ ಆರೋಗ್ಯ ಹಾನಿಕರ. ಕ್ಯಾನ್ಸರ್ , ಶ್ವಾಸಕೋಶ ಸೇರಿದಂತೆ ಹಲವು ಗಂಬೀರವಾದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಿದ್ದರೂ ಶಾಲೆ ಮತ್ತು ಆಸ್ಪತ್ರೆ ಸಮೀಪ ತ್ಯಾಜ್ಯ ಸುರಿದು ಅದಕ್ಕೆ ಬೆಂಕಿ ಹತ್ತಿಸುವುದು ಖಂಡನೀಯ ಎಂದು ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಯಮದ ಪ್ರಕಾರ ತ್ಯಾಜ್ಯವನ್ನು ಸುಡುವಂತಿಲ್ಲ. ಪಂಚಾಯಿತಿಯವರು ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಅದಕ್ಕೆ ಯಾರು ಬೆಂಕಿ ಹಚ್ಚುತ್ತಿದ್ದಾರೆ ಎಂದು ಗೊತ್ತಿಲ್ಲ. ಪಂಚಾತಿಯಿತಿ ಅಥವಾ ಯಾರೇ ಆಗಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವವರ ವಿರುದ್ಧ ವಾಯುಮಾಲಿನ್ಯ ನಿಯಂತ್ರಣಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

‘ಘಟಕಕ್ಕೆ ಜಾಗದ ಕೊರತೆ’

‘ಬೇತಮಂಗಲ ಮೂಲಕ ಚೆನ್ನೈ ಕಾರಿಡಾರ್ ರಸ್ತೆ ಬಂದಿರುವ ಹಿನ್ನೆಲೆಯಲ್ಲಿ ಕಸದ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದಕ್ಕೆ ಜಾಗದ ಕೊರತೆ ಇದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಜಾಗ ಗುರುತಿಸಿ ಕೊಡುವುದಾಗಿ ‌ಅಧಿಕಾರಿಗಳು‌ ತಿಳಿಸಿದ್ದಾರೆ. ಆದಷ್ಟು ಬೇಗ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ’ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಬಾಬು ಶೇಷಾದ್ರಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.