ADVERTISEMENT

ಬೀದಿಗಿಳಿದು ಪ್ರತಿಭಟನೆ: ಸರ್ಕಾರದ ವಿರುದ್ಧ ಕಿಡಿ

ಆಕ್ರೋಶದ ಕಿಡಿ ಹೊತ್ತಿಸಿದ ಉತ್ತರಪ್ರದೇಶ ಯುವತಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 16:14 IST
Last Updated 1 ಅಕ್ಟೋಬರ್ 2020, 16:14 IST
ಉತ್ತರಪ್ರದೇಶದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಕೋಲಾರದಲ್ಲಿ ಗುರುವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ಮಾಡಿದರು.
ಉತ್ತರಪ್ರದೇಶದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಕೋಲಾರದಲ್ಲಿ ಗುರುವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ಮಾಡಿದರು.   

ಕೋಲಾರ: ಉತ್ತರಪ್ರದೇಶದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಜಿಲ್ಲೆಯಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದ್ದು, ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ರಸ್ತೆ ತಡೆ, ಮಾನವ ಸರಪಳಿ, ಮೆರವಣಿಗೆ ಮಾಡಿದ ಪ್ರತಿಭಟನಾಕಾರರು, ‘ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಕೃತ್ಯಗಳು ಹೆಚ್ಚಿದ್ದು, ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಆಡಳಿತಾತ್ಮಕ ಅರಾಜಕತೆ ಸೃಷ್ಟಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಹೆಣ್ಣು ಮಕ್ಕಳು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ಇದೆ. ಉತ್ತರಪ್ರದೇಶ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರ ಸಂಪೂರ್ಣ ವಿಫಲವಾಗಿವೆ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಕಿಡಿಕಾರಿದರು.

ADVERTISEMENT

‘ಬಿಜೆಪಿ ಸರ್ಕಾರ ಉತ್ತರಪ್ರದೇಶದಲ್ಲಿ ರಾಮಮಂದಿರ ಕಟ್ಟಲು ಹೊರಟಿದೆ. ಆದರೆ, ಆ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಮನೆಯಿಂದ ಹೊರ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮತ್ತು ಪೊಲೀಸ್‌ ಇಲಾಖೆಯು ಮಹಿಳೆಯರ ಸುರಕ್ಷತೆ ನಿರ್ಲಕ್ಷಿಸಿವೆ. ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ದಾರೆ’ ಎಂದು ಹೇಳಿದರು.

ಸರ್ವಾಧಿಕಾರಿಗಳು: ‘ಸ್ಥಳೀಯ ಪೊಲೀಸರು ಪ್ರಕರಣ ಮರೆಮಾಚಲು ರಾತ್ರೋರಾತ್ರಿ ಸಂತ್ರಸ್ತ ಯುವತಿಯ ಅಂತ್ಯಕ್ರಿಯೆ ನಡೆಸಿದ್ದಾರೆ. ಕುಟುಂಬ ಸದಸ್ಯರಿಗೆ ಯುವತಿಯ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಿಲ್ಲ. ಸರ್ಕಾರದ ಕೈಗೊಂಬೆಯಾಗಿರುವ ಪೊಲೀಸರು ಸರ್ವಾಧಿಕಾರಿಗಳಂತೆ ನಡೆದುಕೊಂಡಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಸಂತ್ರಸ್ತ ಯುವತಿ ಕುಟುಂಬಕ್ಕೆ ಪರಿಹಾರ ನೀಡಬೇಕು. ಪ್ರಕರಣ ಸಂಬಂಧ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯಯುತ ತನಿಖೆ ನಡೆಸಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದು ಒತ್ತಾಯಿಸಿದರು.

ಅಮಾನತು ಮಾಡಿ: ‘ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರಿಗೆ ರಕ್ಷಣೆ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಮತ್ತು ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ ರಚಿಸಬೇಕು. ಜಸ್ಟಿಸ್ ವರ್ಮಾ ಸಮಿತಿ ಶಿಫಾರಸು ಜಾರಿಗೊಳಿಸಬೇಕು. ಕರ್ತವ್ಯ ಲೋಪ ಎಸಗಿರುವ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಮನವಿ ಮಾಡಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ನಾರಾಯಣಸ್ವಾಮಿ, ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕೆಪಿಆರ್‌ಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಕನ್ನಡ ಸ್ವಾಭಿಮಾನ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಾಮಾಂಜಿನಪ್ಪ, ವಕೀಲ ಎಸ್‌.ಸತೀಶ್‌ ಪಾಲ್ಗೊಂಡರು.

ಒತ್ತಡ ಹೇರಿದೆ: ಪ್ರತಿಭಟನಾ ಮೆರವಣಿಗೆ ನಡೆಸಿದ ಭಾರತೀಯ ದಲಿತ ಸೇನೆ ಸದಸ್ಯರು, ‘ಉತ್ತರಪ್ರದೇಶ ಸರ್ಕಾರ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ ಹೇರಿದೆ. ಪೊಲೀಸರು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದು, ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.

‘ಪ್ರಕರಣದ ಸಂಬಂಧ ಉನ್ನತ ತನಿಖೆ ನಡೆಸಬೇಕು. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಆರೋಪಿಗಳ ರಕ್ಷಣೆಗೆ ನಿಂತಿರುವ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.