ಶ್ರೀನಿವಾಸಪುರ: ಆಡಳಿತವನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ಸ್ವಚ್ಛಗೊಳಿಸಲು ಪಣ ತೊಟ್ಟಂತಿರುವ ಉಪಲೋಕಾಯುಕ್ತ ಬಿ.ವೀರಪ್ಪ ಅವರು ತಮ್ಮ ತವರು ಜಿಲ್ಲೆಯಲ್ಲಿ ಪಂಚಾಯಿತಿ ಕಚೇರಿ ಭೇಟಿ ಅಭಿಯಾನ ಮುಂದುವರಿಸಿದ್ದಾರೆ.
ಶನಿವಾರ 10 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಚಾಟಿ ಬೀಸಿದರು. ಮಂಗಳವಾರ 9 ಗ್ರಾಮ ಪಂಚಾಯಿತಿ, ಐದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಒಂದು ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಪ್ರಮುಖವಾಗಿ ಪಿಡಿಒಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬಿಸಿ ಮುಟ್ಟಿಸುತ್ತಿದ್ದಾರೆ.
ತಾಲ್ಲೂಕಿನ ಮುದಿಮಡುಗು ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಪಂಚಾಯಿತಿಗಳಲ್ಲಿ ಗಣಕಯಂತ್ರದ ಸಿಬ್ಬಂದಿಯ ಮೊಬೈಲ್ ಫೋನ್ ಪೇ ವ್ಯವಹಾರ ಕಂಡು ಬೆರಗಾದರು. ವರ್ಷದ ವ್ಯವಹಾರದ ಮಾಹಿತಿ ಕೊಡುವಂತೆ ಸೂಚಿಸಿದರು. ಅಲ್ಲದೇ, ಪಂಚಾಯಿತಿಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ರಾಯಲ್ಪಾಡು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಕೆಲ ಕಾಮಗಾರಿಗಳಿಗೆ ಅಧ್ಯಕ್ಷರು ಸಹಿ ಹಾಕಿದ್ದು, ಪಿಡಿಒ ಸಿಹಿ ಹಾಕದಿರುವುದರ ಬಗ್ಗೆ ಪ್ರಶ್ನಿದರು. ವಿವಿಧ ಮೂಲ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಇದೇ ಸಮಯದಲ್ಲಿ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು.
ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಮಾಹಿತಿ ಪಡೆದರು. ಕೆಲ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ಎಲ್ಲಾ ಘಟಕಗಳ ಕಾರ್ಯನಿರ್ವಹಿಸಲು ಬೇಕಾದ ವ್ಯವಸ್ಥೆ ಮಾಡಿಸುವಂತೆ ಸೂಚಿಸಿದರು.
ಸ್ಥಳೀಯ ಅಧಿಕಾರಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಮೂಲ ಸೌಲಭ್ಯಗಳನ್ನು ತಕ್ಷಣ ಸರಿಪಡಿಸಬೇಕು. ಅಧಿಕಾರಿಗಳು ದಾಖಲೆಗಳು ಸರಿ ಇಲ್ಲದೆ ಇರದೆ ಇರುವದರ ಬಗ್ಗೆ ಸರಿಪಡಿಸುವಂತೆ ಎಂದು ವೀರಪ್ಪ ಸೂಚಿಸಿದರು.
ಅಡ್ಡಗಲ್, ಕೂರಿಗೇಪಲ್ಲಿ, ಬೈರಗಾನಪಲ್ಲಿ, ಗೌನಿಪಲ್ಲಿ, ಕೋಡಿಪಲ್ಲಿ, ರೋಣೂರು, ಹೊದಲಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ಅರವಿಂದ್, ಜಿಲ್ಲಾ ಲೋಕಾಯುಕ್ತ ಎಸ್‍ಪಿ ಆಂಟನಿ ಜಾನ್, ಡಿವೈಎಸ್‍ಪಿ ಸುಧೀರ್, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಆಂಜನಪ್ಪ, ರೇಣುಕಾ, ಪ್ರದೀಪ್ ಪೂಜಾರಿ, ಸಿಬ್ಬಂದಿಗ ಎಸ್.ಆರ್.ದೇವಪ್ಪ, ಶ್ರೀನಾಥ್, ನಾಗಭೂಷಣ್, ರಮೇಶ್, ಕಿಶೋರ್, ಶಿವಶಂಕರ್, ವಾಸುದೇವ್, ಅಜಯ್, ಮಂಜಪ್ಪ, ನಾಗವೇಣಿ, ಯಶೋದಾ, ಮಾನಸಾ, ಪವಿತ್ರಾ, ಗೀತಾ, ಮುನಿರತ್ನ, ಶೋಭಾ, ಇಒ ಕೆ.ಸರ್ವೇಶ್, ತಾಲ್ಲೂಕು ಪಂಚಾಯಿತಿ ಎಡಿ ರಾಮಪ್ಪ, ವ್ಯವಸ್ಥಾಪಕ ಮಂಜುನಾಥ್ ಇದ್ದರು.
Highlights - ಗ್ರಾಮ ಪಂಚಾಯಿತಿ ಆಡಳಿತ ಸ್ವಚ್ಛತೆಗೆ ಪಣ ತೊಟ್ಟಿರುವ ಉಪಲೋಕಾಯುಕ್ತ ಪಂಚಾಯಿತಿಗೆ ಸಂಬಂಧಿಸಿದಂತೆ ಕಾಮಗಾರಿಗಳ ಬಗ್ಗೆ ಮಾಹಿತಿ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಸೂಚನೆ
ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಆಡಳಿತ ಸ್ವಚ್ಛವಾಗಬೇಕಿದೆ. ಶ್ರೀನಿವಾಸಪುರ ನನ್ನ ತವರು ತಾಲ್ಲೂಕು ಆದ ಕಾರಣ ಇಲ್ಲಿಂದಲೇ ಪರಿಶೀಲನೆ ನಡೆಸುತ್ತಿದ್ದೇನೆಬಿ.ವೀರಪ್ಪ ಉಪಲೋಕಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.