ADVERTISEMENT

ಮಾವು ರಕ್ಷಣೆಗಾಗಿ ಮೋಹಕ ಬಲೆಗೆ ಮೊರೆ

ಊಜಿ ನೊಣಗಳ ಕಾಟ: ನಿರ್ಲಕ್ಷಿಸಿದರೆ ಇಳುವರಿ ನಷ್ಟ

ಜೆ.ಆರ್.ಗಿರೀಶ್
Published 30 ಮಾರ್ಚ್ 2021, 19:30 IST
Last Updated 30 ಮಾರ್ಚ್ 2021, 19:30 IST
ಕೋಲಾರ ಜಿಲ್ಲೆಯ ಮಾವಿನ ತೋಟವೊಂದರಲ್ಲಿ ಮರದ ಕೊಂಬೆಗೆ ಮೋಹಕ ಬಲೆ ಅಳವಡಿಸಿರುವುದು.
ಕೋಲಾರ ಜಿಲ್ಲೆಯ ಮಾವಿನ ತೋಟವೊಂದರಲ್ಲಿ ಮರದ ಕೊಂಬೆಗೆ ಮೋಹಕ ಬಲೆ ಅಳವಡಿಸಿರುವುದು.   

ಕೋಲಾರ: ಜಿಲ್ಲೆಯ ಮಾವು ಬೆಳೆಗಾರರು ಊಜಿ ನೊಣಗಳ ಕಾಟದಿಂದ ಮಾವು ಫಸಲು ರಕ್ಷಿಸಿಕೊಳ್ಳಲು ಮೋಹಕ ಬಲೆಯ ಮೊರೆ ಹೋಗಿದ್ದಾರೆ.

ಜಿಲ್ಲೆಯು ಮಾವು ಬೆಳೆಗೆ ರಾಜ್ಯದಲ್ಲೇ ಹೆಸರುವಾಸಿಗಿದ್ದು, ಶ್ರೀನಿವಾಸಪುರ ತಾಲ್ಲೂಕು ಮಾವಿನ ನಗರಿ ಎಂದೇ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಸುಮಾರು 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ರಸಪುರಿ, ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಂ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳಿವೆ.

ಪ್ರತಿ ವರ್ಷ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮಾವಿಗೆ ಊಜಿ ನೊಣಗಳ ಕಾಟ ಹೆಚ್ಚಾಗಿರುತ್ತದೆ. ಊಜಿ ಅಥವಾ ಹಣ್ಣು ನೊಣದ ಬಾಧೆಯಿಂದ ಸರಾಸರಿ ಶೇ 25ರಷ್ಟು ಇಳುವರಿ ನಷ್ಟವಾಗುತ್ತದೆ. ಮತ್ತೊಂದೆಡೆ ಹಣ್ಣಿನ ಗುಣಮಟ್ಟ ಕುಸಿದು ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತದೆ. ಊಜಿ ನೊಣದ ಹಾವಾಳಿಯಿಂದ ಪಾರಾಗಲು ಮೋಹಕ ಬಲೆ ಅಳವಡಿಕೆಯು ಮಾವು ಬೆಳೆಗಾರರಿಗೆ ಇರುವ ಏಕೈಕ ಪರಿಹಾರೋಪಾಯ.

ADVERTISEMENT

ಕಳೆದು ತಿಂಗಳು ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವಿನ ಮರಗಳಲ್ಲಿ ಹೂವು ಹಾಗೂ ಪಿಂದೆಗೆ ಹೆಚ್ಚಿನ ಹಾನಿಯಾಗಿದೆ. ಊಜಿ ನೊಣದ ಹತೋಟಿಗೆ ರೈತರು ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಇಳುವರಿ ನಷ್ಟವಾಗುವ ಅಪಾಯವಿದೆ.

ಹೆಚ್ಚಿನ ಬೆಲೆಯಿಲ್ಲ

ಊಜಿ ನೊಣಗಳು ಹೀಚನ್ನು ಕಚ್ಚಿ ಮೊಟ್ಟೆ ಇಡುತ್ತವೆ. ಅವು ಹುಳುಗಳಾಗಿ ಮಾರ್ಪಟ್ಟು ಹೀಚನ್ನು ಪ್ರವೇಶಿಸುತ್ತವೆ. ದಿನ ಕಳೆದಂತೆ ಹುಳುಗಳು ಗಾತ್ರದಲ್ಲಿ ದೊಡ್ಡದಾಗಿ ಬೆಳೆಗೆ ಹಾನಿ ಉಂಟು ಮಾಡುತ್ತವೆ. ಎಳೆ ಹಂತದಲ್ಲಿ ಬೀಜ ಸೇರಿದ ಹುಳುಗಳು ಕಾಯಿಯನ್ನು ಕೊರೆದು ಹೊರಬರುತ್ತವೆ. ಅಂತಹ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವುದಿಲ್ಲ.

ಕಾಯಿಗೂ ಊಜಿ ನೊಣಗಳ ಕಾಟ ತಪ್ಪಿದ್ದಲ್ಲ. ಕೊಳೆತ ಕಾಯಿಗಳಿಂದ ಹೊರ ಬರುವ ನೊಣಗಳು ಆರೋಗ್ಯವಂತ ಕಾಯಿಯನ್ನು ಕಚ್ಚಿ ಮೊಟ್ಟೆ ಇಡುತ್ತವೆ. ಮೊಟ್ಟೆ ಒಡೆದು ಹೊರಬರುವ ಹುಳುಗಳು ಕಾಯಿ ಪ್ರವೇಶಿಸಿ ಕೊಳೆಯುವಂತೆ ಮಾಡುತ್ತವೆ. ಈ ನೊಣಗಳ ಹಾವಳಿಯನ್ನು ವ್ಯವಸ್ಥಿತವಾಗಿ ತಡೆದಲ್ಲಿ ಇಳುವರಿ ಹೆಚ್ಚುತ್ತದೆ. ಮೋಹಕ ಬಲೆಯನ್ನು ಸಾಂಘಿಕವಾಗಿ ಬಳಸುವುದರಿಂದ ಹೆಚ್ಚು ಪ್ರಯೋಜನವಾಗುತ್ತದೆ.

ತಯಾರಿಕೆ ವಿಧಾನ

ಮೋಹಕ ಬಲೆ ತಯಾರಿಸುವ ವಿಧಾನ ತುಂಬಾ ಸರಳ. ಒಂದು ಲೀಟರ್‌ ಸಾಮರ್ಥ್ಯದ ಖಾಲಿ ಪ್ಲಾಸ್ಟಿಕ್ ಬಾಟಲ್‌ನ ಬಾಯಿಗೆ ಸ್ವಲ್ಪ ಕೆಳಭಾಗದಲ್ಲಿ 2 ರಂಧ್ರ ಕೊರೆಯಬೇಕು. ಬಾಟಲ್‌ನ ಒಳಗೆ ಒಂದು ಮರದ ತುಂಡು ಕಟ್ಟಬೇಕು. ಆ ಮರದ ತುಂಡಿನ ಮೇಲೆ 1 ಮಿ.ಲೀ ಮಿಥೈಲ್‌ ಯೂಜಿನಾಲ್ ಮತ್ತು 1 ಮಿ.ಲೀಯಷ್ಟು ಡೈಕ್ಲೋರಾವಾಸ್‌ ಔಷಧ ಲೇಪಿಸಬೇಕು.

ಬಾಟಲ್‌ನ ಮುಚ್ಚಳ ಹಾಕಿದ ಬಳಿಕ ಅದನ್ನು ಆಳೆತ್ತರದಲ್ಲಿ ಮಾವಿನ ಮರದ ಕೊಂಬೆಗೆ ಕಟ್ಟಬೇಕು. ಔಷಧಿಯ ವಾಸನೆಯಿಂದ ಆಕರ್ಷಿತವಾದ ಊಜಿ ನೊಣಗಳಲ್ಲಿ ಶೇ 90ರಷ್ಟು ಬಾಟಲಿಯನ್ನು ಪ್ರವೇಶಿಸಿ ಸಾಯುತ್ತವೆ. ಮಾರುಕಟ್ಟೆಯಲ್ಲಿ ಸಿದ್ಧ ಮೋಹಕ ಬಲೆಗಳು ಸಿಗುತ್ತವೆ. ಒಂದು ಎಕರೆ ಮಾವಿನ ತೋಟಕ್ಕೆ ಐದರಿಂದ ಆರು ಕಡೆ ಮೋಹಕ ಬಲೆ ಕಟ್ಟಬೇಕು.

ಮಾವು ಬೆಳೆಗಾರರ ಅನುಕೂಲಕ್ಕಾಗಿ ಮಾವು ಅಭಿವೃದ್ಧಿ ಮಂಡಳಿಯು ಕೀಟಗಳ ನಿವಾರಣೆಗೆ ಮೋಹಕ ಬಲೆ ತಯಾರಿಸಿದ್ದು, ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಊಜಿ ನೊಣಗಳ ನಿಯಂತ್ರಣದಿಂದ ಫಸಲು ಹೆಚ್ಚುವುದರ ಜತೆಗೆ ಮಾವಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಉತ್ತಮ ಗುಣಮಟ್ಟದ ಮಾವಿಗೆ ಮಾರುಕಟ್ಟೆಯಲ್ಲಿ ಲಾಭದಾಯಕ ಬೆಲೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.