ADVERTISEMENT

ವೈಕುಂಠ ಏಕಾದಶಿ: ಚಿಕ್ಕತಿರುಪತಿಗೆ ಹರಿದುಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 14:02 IST
Last Updated 10 ಜನವರಿ 2025, 14:02 IST
ಮಾಲೂರು ಪಟ್ಟಣದ ಒಂದನೇ ವಾರ್ಡ್‌ನ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ದೇವರಿಗೆ ವಿಶ್ವರೂಪ ದರ್ಶನ ಅಲಂಕಾರ ಮಾಡಲಾಗಿತ್ತು
ಮಾಲೂರು ಪಟ್ಟಣದ ಒಂದನೇ ವಾರ್ಡ್‌ನ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ದೇವರಿಗೆ ವಿಶ್ವರೂಪ ದರ್ಶನ ಅಲಂಕಾರ ಮಾಡಲಾಗಿತ್ತು   

ಮಾಲೂರು: ಪ್ರಸಿದ್ಧ ಯಾತ್ರಾ ಸ್ಥಳ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.

ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ದೇವರಿಗೆ ಬೆಳಗ್ಗೆಯಿಂದಲೇ ಪಂಚಾಮೃತ ಅಭಿಷೇಕ, ತೀರ್ಥ ಪ್ರಸಾದ, ವೇದ ಮಂತ್ರ ಪಾರಾಯಣ, ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಆಭರಣ ಅಲಂಕಾರ ಮಾಡಲಾಗಿತ್ತು. ಶುಕ್ರವಾರ ನಸುಕಿನ ಜಾವ 3 ಗಂಟೆಗೆ ದೇವಾಲಯದ ಬಾಗಿಲು ತೆರೆದು ಪೂಜಾ ಕೈಂಕರ್ಯಗಳು ನಡೆದವು.

5 ಗಂಟೆಗೆ ದೇವರಿಗೆ ವಿಶೇಷ ಮಹಾಮಂಗಳಾರತಿ ಪೂಜೆ ಸಲ್ಲಿಸಿ ಭಕ್ತರು ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಯಿತು. ಭಕ್ತರು ಹರಿಕೆ ಹೊತ್ತು, ಮುಡಿ ಅರ್ಪಿಸಿ ಗೋವಿಂದ ನಾಮ ಸ್ಮರಣೆ ಮಾಡುತ್ತಾ ದೇವರ ದರ್ಶನ ಪಡೆದರು. ತಾಲ್ಲೂಕಿನ ಗಡಿ ಭಾಗದಲ್ಲಿರುವ ಚಿಕ್ಕತಿರುಪತಿ ತಮಿಳು ನಾಡಿನ ಗಡಿಭಾಗವು ಆಗಿರುವುದರಿಂದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಬೆಂಗಳೂರಿನಿಂದ ನೂರಾರು ಭಕ್ತರು ಆಗಮಿಸಿದ್ದರು. 

ADVERTISEMENT

ಭಕ್ತರನ್ನು ನಿಯಂತ್ರಿಸಲು ₹100 ಟಿಕೆಟ್‌ನ ವಿಐಪಿ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೆ ಭಕ್ತರ ಮಹಾ ಸಾಗರ ಹರಿದು ಬಂದಿತ್ತು. ಶುಕ್ರವಾರ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9ರವರೆಗೆ ಒಂದೇ ದಿನದಲ್ಲಿ ಸುಮಾರು 50 ಲಕ್ಷ ಮಂದಿ ಭಕ್ತರು ದೇವರ ದರ್ಶನ ಪಡೆದರು.

ಶಾಸಕ ಕೆ.ವೈ. ನಂಜೇಗೌಡ, ತಹಶೀಲ್ಧಾರ್ ಕೆ.ರಮೇಶ್, ಮಾಜಿ ಶಾಸಕ ಎ. ನಾಗರಾಜ್ ಇತರರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ದೇವಾಲಯ ಸಮಿತಿ, ಅರ್ಚಕ ರವಿ, ಪ್ರಕಾಶ್, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮೇಲ್ವಿಚಾರಣೆ ಕೈಗೊಂಡಿತ್ತು. 

ಪಟ್ಟಣದ ಹೃದಯ ಭಾಗದಲ್ಲಿರುವ ರಾಮಂಜನೇಯ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಯಿತು. ಪಟ್ಟಣದ ನೂರಾರು ಭಕ್ತರು ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದರು.

ಪಟ್ಟಣದ ರೈಲ್ವೆ ಸೇತುವೆ ಬಳಿ ಇರುವ ವೀರಾಂಜನೇಯ ದೇಗುಲ, ವೆಂಕಟೇಶ್ವರ ದೇವಾಲಯ, ಧರ್ಮರಾಯ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ವೈಕುಂಠ ದ್ವಾರ ಆಯೋಜಿಸಲಾಗಿತ್ತು. ಅಪಾರ ಭಕ್ತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. 

ಚಿಕ್ಕತಿರುಪತಿಯ ವೆಂಕಟರಮಣ ದೇಗುಲದಲ್ಲಿ ವೆಂಕಟರಮಣ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು
ಚಿಕ್ಕತಿರುಪತಿಯ ವೆಂಕಟರಮಣ ದೇಗುಲದಲ್ಲಿ ವೈಕುಂಠ ದ್ವಾರ ಪ್ರವೇಶಿಸಲು ನೂರಾರು ಭಕ್ತರು ಸಾಲಿನಲ್ಲಿ ನಿಂತಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.