ADVERTISEMENT

ವಲ್ಲಭ ಭಾಯಿ ಪಟೇಲ್‌ ಏಕೀಕರಣದ ಶಿಲ್ಪಿ

ಸರ್ಕಾರಿ ಬಾಲಕರ ಕಾಲೇಜು ಸಹಾಯಕ ಪ್ರಾಧ್ಯಾಪಕ ಶಂಕರಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 14:44 IST
Last Updated 31 ಅಕ್ಟೋಬರ್ 2019, 14:44 IST
ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಸರ್ಕಾರಿ ಬಾಲಕರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ಶಂಕರಪ್ಪ ಉದ್ಘಾಟಿಸಿದರು.
ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಸರ್ಕಾರಿ ಬಾಲಕರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ಶಂಕರಪ್ಪ ಉದ್ಘಾಟಿಸಿದರು.   

ಕೋಲಾರ: ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ’ ಎಂದು ಸರ್ಕಾರಿ ಬಾಲಕರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ಶಂಕರಪ್ಪ ಬಣ್ಣಿಸಿದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ನೆಹರೂ ಯುವಕೇಂದ್ರ ಮತ್ತು ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಮಾತನಾಡಿದರು.

‘ಹೈದರಾಬಾದ್‌ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ. ಅವರ ಶ್ರಮದಿಂದ ಏಕೀಕೃತ ಭಾರತ ನಿರ್ಮಾಣವಾಯಿತು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಕಾಯಿದೆ ಪ್ರಕಾರ ಬ್ರಿಟೀಷರ ಆಳ್ವಿಕೆಯಿಂದ 565 ಸ್ವಯಂ ಆಡಳಿತ ಸಂಸ್ಥಾನಗಳನ್ನು ಬಿಡುಗಡೆ ಮಾಡಿಸಿದರು’ ಎಂದರು.

ADVERTISEMENT

‘ಆಧುನಿಕ ಅಖಿಲ ಭಾರತ ಸೇವೆ ವ್ಯವಸ್ಥೆ ಸ್ಥಾಪಿಸಿದ ವಲಭಭಾಯಿ ಪಟೇಲ್‌ ಅವರನ್ನು ಭಾರತದ ನಾಗರಿಕ ಸೇವಕರ ಪೋಷಕ ಸಂತ ಎಂದು ಕರೆಯಲಾಗುತ್ತದೆ. ಜರ್ಮನಿಯ ಬಿಸ್ಮಾರ್ಕ್‌ನಂತೆ ಆಧುನಿಕ ಭಾರತದ ಏಕೀಕರಣದ ಮಹಾನ್ ಶಿಲ್ಪಿಯಾಗಿರುವ ಅವರು ಯುವ ಜನತೆಗೆ ಸ್ಫೂರ್ತಿಯ ಸೆಲೆ. ಅವರ ಆದರ್ಶ ಮತ್ತು ದೇಶ ಪ್ರೇಮವು ವಿದ್ಯಾರ್ಥಿಗಳಲ್ಲೂ ಬೆಳೆಯಬೇಕು’ ಎಂದು ಆಶಿಸಿದರು.

‘ಉತ್ತಮ ದೇಶ ನಿರ್ಮಾಣವು ವಿದ್ಯಾರ್ಥಿಗಳ ಜವಾಬ್ದಾರಿ. ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾಗದೆ ಸಮಾಜದ ಅಭಿವೃದ್ಧಿಗೆ ಪಣ ತೊಡಬೇಕು. ಮೊಬೈಲ್‌ನಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲವಿದೆ. ಇದನ್ನು ತಿಳಿದು ಸದುದ್ದೇಶಕ್ಕೆ ಮೊಬೈಲ್‌ ಬಳಸಬೇಕು’ ಎಂದು ಕಿವಿಮಾತು ಹೇಳಿದರು.

ದಾರಿದೀಪ: ‘ವಲ್ಲಭಭಾಯಿ ಪಟೇಲ್‌ ಅಪ್ರತಿಮ ವ್ಯಕ್ತಿ. ಅವರ ತತ್ವಾದರ್ಶ ಯುವಕ ಯುವತಿಯರಿಗೆ ದಾರಿದೀಪ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅವರು ಸಮಗ್ರತೆ, ಏಕತೆ, ಸಂಘಟನೆ ಹಾಗೂ ಅಧಿಕಾರ ವಿಕೇಂದ್ರೀಕರಣ ಜಾರಿಗೆ ಶ್ರಮಿಸಿದರು’ ಎಂದು ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ರಾಜೇಂದ್ರ ತಿಳಿಸಿದರು.

‘ಗುಜರಾತ್‌ನಲ್ಲಿ ₹ 2,389 ಕೋಟಿ ವೆಚ್ಚದಲ್ಲಿ ವಲ್ಲಭಭಾಯಿ ಪಟೇಲ್‌ರ ಏಕತಾ ಪ್ರತಿಮೆ ನಿರ್ಮಿಸಲಾಗಿದೆ. ಜತೆಗೆ ಗುಜರಾತ್‌ನ ಅಣೆಕಟ್ಟೆಯೊಂದಕ್ಕೆ ಅವರ ಹೆಸರಿಡಲಾಗಿದೆ. ವಿದ್ಯಾರ್ಥಿಗಳು ಇಂತಹ ಮಹನೀಯರನ್ನು ಸ್ಮರಿಸಬೇಕು. ಜತೆಗೆ ಆದರ್ಶವಾಗಿ ತೆಗೆದುಕೊಂಡು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕು. ದೇಶವನ್ನು ಛಿದ್ರಗೊಳಿಸುವ ಶಕ್ತಿಗಳ ಬಗ್ಗೆ ಜಾಗೃತರಾಗಿರಬೇಕು’ ಎಂದು ಸಲಹೆ ನೀಡಿದರು.

ವಿಷಾದಕರ: ‘ಮಾಜಿ ಪ್ರಧಾನಿ ನೆಹರೂ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ಭಾರತದಿಂದ ಪ್ರತ್ಯೇಕವಾಗಲು ಮುಂದಾಗಿದ್ದ ಹೈದರಾಬಾದ್, ಜುನಾಗಡ್ ಹಾಗೂ ಜಮ್ಮು ಕಾಶ್ಮೀರವನ್ನು ದೇಶದಲ್ಲೇ ಉಳಿಸಿಕೊಳ್ಳಲು ವಲ್ಲಭಭಾಯಿ ಪಟೇಲ್‌ ತಂತ್ರಗಾರಿಕೆ ರೂಪಿಸಿದರು. ಅದೇ ಸಂದರ್ಭದಲ್ಲಿ ಮೈಸೂರು ರಾಜ್ಯ ಸಹ ಭಾರತದಿಂದ ಪ್ರತ್ಯೇಕವಾಗಲು ತೀರ್ಮಾನಿಸಿದ್ದು ವಿಷಾದಕರ’ ಎಂದರು.

‘ವಲ್ಲಭಭಾಯಿ ಪಟೇಲ್‌ 1918ರಲ್ಲಿ ಮಹಾತ್ಮ ಗಾಂಧೀಜಿಯ ಸಖ್ಯ ಬೆಳೆಸಿದ ನಂತರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡರು. ನೆಹರೂ ಮತ್ತು ಪಟೇಲ್ ನಡುವಿನ ಭಿನ್ನಾಭಿಪ್ರಾಯಕ್ಕೆ ಗಾಂಧೀಜಿ ಸಂಧಾನಕಾರರಾಗಿದ್ದರು’ ಎಂದು ವಿವರಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ, ಗೋ ಪ್ಲಾಗ್ ಸಂಘಟನೆ ಸಂಸ್ಥಾಪಕ ಅಧ್ಯಕ್ಷೆ ಸುಮಂಗಲಿ, ಉಪನ್ಯಾಸಕಾರದ ವಿನುತಾ, ಜಿ.ಎಂ.ಪ್ರಕಾಶ್, ನಂದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.