ADVERTISEMENT

ವಾಲ್ಮೀಕಿ ತತ್ವಾದರ್ಶ ಸಮಾಜಕ್ಕೆ ದಾರಿದೀಪ

ರಾಮಾಯಣ ಗ್ರಂಥ ಸಾರ್ವಕಾಲಿಕ: ಜಿಲ್ಲಾಧಿಕಾರಿ ಸತ್ಯಭಾಮ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 14:00 IST
Last Updated 31 ಅಕ್ಟೋಬರ್ 2020, 14:00 IST
ಕೋಲಾರದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ರಾಹುಲ್ ಅವರಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ₹ 1 ಲಕ್ಷ ಸಹಾಯಧನದ ಚೆಕ್ ವಿತರಿಸಿದರು.
ಕೋಲಾರದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ರಾಹುಲ್ ಅವರಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ₹ 1 ಲಕ್ಷ ಸಹಾಯಧನದ ಚೆಕ್ ವಿತರಿಸಿದರು.   

ಕೋಲಾರ: ‘ಮಹರ್ಷಿ ವಾಲ್ಮೀಕಿಯು ರಚಿಸಿದ ರಾಮಾಯಣವು ವಿಶ್ವ ಮನ್ನಣೆ ಪಡೆದಿದೆ. ಅವರ ತತ್ವಾದರ್ಶ ಸಮಾಜಕ್ಕೆ ದಾರಿದೀಪ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕ ಜಯಂತಿಯಲ್ಲಿ ಮಾತನಾಡಿ, ‘ರಾಮಾಯಣ ರಚನೆಯಾಗಿ ಶತಮಾನಗಳೇ ಕಳೆದರೂ ಅದು ಸಾರ್ವಕಾಲಿಕ. ಚಿಕ್ಕವರಿಂದ ಹಿಡಿದು ವಯೋವೃದ್ಧರು ಸಹ ರಾಮಾಯಣ ಓದಬಹುದು. ಇದಕ್ಕೆ ವಯಸ್ಸಿನ ಅಂತರವಿಲ್ಲ. ಜಾತಿ ಮತ್ತು ಧರ್ಮದ ಬೇಧ ವಿಲ್ಲ’ ಎಂದರು.

‘ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಎಷ್ಟು ಮುಖ್ಯವೋ ಅದೇ ರೀತಿ ಹಿಂದೂ ಧರ್ಮಕ್ಕೆ ರಾಮಾಯಣ ಧರ್ಮ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಪೋಷಕರು, ಕುಟುಂಬ ನಿರ್ವಹಣೆ, ಅಣ್ಣ ತಮ್ಮಂದಿರು, ಗುರು ಶಿಷ್ಯರ ಸಂಬಂಧ, ದಾಂಪತ್ಯ, ಕೋಪ, ಪ್ರೀತಿ, ಭಕ್ತಿ, ಭಾವ ಕಾಣಬಹುದು. ಮಾನವೀಯ ಮೌಲ್ಯಗಳನ್ನು ಬೆಳೆಸುವ ವಿಷಯಗಳು ಇದರಲ್ಲಿವೆ. ಆದ್ದರಿಂದ ಎಲ್ಲರೂ ರಾಮಾಯಣ ಓದಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಮಹರ್ಷಿ ವಾಲ್ಮೀಕಿ ಮಹಾನ್ ಪುರುಷ, ತತ್ವಜ್ಞಾನಿ, ಅಗಣಿತ ಮಹೀಮರಾಗಿದ್ದರು. ಅವರು ಅನೇಕ ಸಂಸ್ಕೃತಿಗಳ ಬಗ್ಗೆ ಆಳ ಅಧ್ಯಯನ ಮಾಡಿ ರಾಮಾಯಣ ಗ್ರಂಥ ರಚಿಸಿದರು. ಪ್ರತಿಭೆಗೆ ಜಾತಿ ಮತದ ಅಡ್ಡಿಯಿಲ್ಲ ಎಂಬುದನ್ನು ಸಾರಿದ ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತರಲ್ಲ, ಅವರು ಇಡೀ ಜನ ಸಮುದಾಯದ ಆದರ್ಶ ಪುರುಷ’ ಎಂದು ಬಣ್ಣಿಸಿದರು.

ಮನುಕುಲಕ್ಕೆ ದಾರಿ ದೀಪ: ‘ದೇಶದ 2 ಮಹಾನ್‌ ಹಿಂದೂ ಗ್ರಂಥಗಳಲ್ಲಿ ಒಂದಾದ ರಾಮಾಯಣವನ್ನು ಮಹರ್ಷಿ ವಾಲ್ಮೀಕಿ ಸಮುದಾಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ರಾಮಾಯಣವು ಸತ್ಯ ಮತ್ತು ಧರ್ಮದ ನಡುವೆ ಇರುವ ವ್ಯತ್ಯಾಸ ಹಾಗೂ ಪರಿಣಾಮಗಳನ್ನು ಸಾರಿ ಹೇಳುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್‌.ರವಿಕುಮಾರ್ ಅಭಿಪ್ರಾಯಪಟ್ಟರು.

‘ರಾಮಾಯಣವು ಕೇವಲ ಧರ್ಮದ ಪ್ರತೀಕವಾಗಿರದೆ ಇಡೀ ಮನುಕುಲಕ್ಕೆ ದಾರಿ ದೀಪವಾಗಿದೆ. ವಾಲ್ಮೀಕಿಯು ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಬೇಕೆಂಬ ಸಂದೇಶ ನೀಡಿದರು. ಸಮಾಜದಲ್ಲಿ ಹೆಣ್ಣು ಹೇಗಿರಬೇಕು, ಯಾವ ಗುಣ ಹೊಂದಿರಬೇಕು ಎಂಬುದನ್ನು ರಾಮಾಯಣದಲ್ಲಿ ಸೀತೆ ಮೂಲಕ ತಿಳಿಸಿದ್ದಾರೆ’ ಎಂದರು.

ಅಭಿಮಾನದಿಂದ ಆಚರಿಸಿ: ‘ಸರ್ಕಾರ ಪ್ರತಿ ಜನಾಂಗದ ಮೇರು ಪುರುಷರ ಜಯಂತಿ ಆಚರಿಸುತ್ತಿದೆ. ಜನರ ಮನಸ್ಸನ್ನು ಪರಿವರ್ತಿಸಿ ಸಾಮರಸ್ಯ ಮೂಡಿಸುವುದು ಇದರ ಉದ್ದೇಶ. ಸರ್ಕಾರದ ಆದೇಶಕ್ಕೆ ಕಟ್ಟುಬಿದ್ದು ಜಯಂತಿ ಆಚರಿಸುವಂತೆ ಆಗಬಾರದು. ಬದಲಿಗೆ ಮಹನೀಯರು ಸಮಾಜಕ್ಕೆ ನೀಡಿರುವ ಕೊಡುಗೆ ಸ್ಮರಿಸಲು ಅಭಿಮಾನದಿಂದ ಜಯಂತಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ನಾಯಕ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ರಾಹುಲ್ ಅವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₹ 1 ಲಕ್ಷ ಸಹಾಯಧನದ ಚೆಕ್ ವಿತರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯರಾಮರೆಡ್ಡಿ, ನಗರಸಭೆ ಆಯುಕ್ತ ಶ್ರೀಕಾಂತ್ ಹಾಗೂ ನಾಯಕ ಸಮುದಾಯದ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.