
ಆಫ್ರಿಕನ್ ಜಂಬೂ ನೃತ್ಯ ಪ್ರದರ್ಶನ | 'ಜ್ಞಾನ ದೇಗುಲ' ಸಾಮಾಜಿಕ ನಾಟಕ ಪ್ರದರ್ಶನ | ಆದಿಮ ರಂಗ ತಂಡದಿಂದ ನೃತ್ಯ ಪ್ರದರ್ಶನ
ಕೋಲಾರ: ಶಿಕ್ಷಣ ವ್ಯವಸ್ಥೆಯಲ್ಲಿ ಈಗ ಮೌಲ್ಯಕ್ಕಿಂತ ಕೌಶಲ ಬೇಕು ಎಂಬ ಕೂಗು ಎದ್ದಿದೆ. ಆದರೆ, ಶಿಕ್ಷಣವು ಮೌಲ್ಯ ಹಾಗೂ ಕೌಶಲದ ಮಿಶ್ರಣವಾಗಿರಬೇಕು. ಇಲ್ಲದಿದ್ದರೆ ಮತ್ತೆ ಹಿಂದಿನ ತಪ್ಪು ಪುನರಾವರ್ತನೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.
ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ನೆಲಪಠ್ಯಗಳ ರಚನಾ ಕಮ್ಮಟ ಕಾರ್ಯಾಗಾರ-3 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಶಿಕ್ಷಣ ವ್ಯವಸ್ಥೆ ಸತ್ವರಹಿತವಾಗಿದೆ. ಮನುಷ್ಯತ್ವ ಇರುವ, ಸಂವೇದನೆಗಳಿಗೆ ಗೌರವ ನೀಡುವ ಪಠ್ಯಗಳು ಇಲ್ಲವಾಗಿವೆ. ಶಿಕ್ಷಣ ವ್ಯವಸ್ಥೆಯು ವ್ಯಕ್ತಿತ್ವ ನಿರ್ಮಾಣ ಮಾಡುತ್ತಿಲ್ಲ; ವ್ಯಕ್ತಿ ನಿರ್ಮಾಣ ಮಾಡುವಂತಿದೆ. ಹೀಗಾಗಿ, ವ್ಯಕ್ತಿತ್ವ ನಿರ್ಮಾಣ ಮಾಡುವ ಶಿಕ್ಷಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ದೇಶದಲ್ಲಿನ ಹಿಂದಿನ ಶೈಕ್ಷಣಿಕ ನೀತಿಗಳನ್ನು ಅವಲೋಕಿಸಿದರೆ ಮೌಲ್ಯಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಜೀವನ ಹಾಗೂ ಜೀವನೋಪಾಯಕ್ಕೆ ಬೇಕಾದ ಶಿಕ್ಷಣಕ್ಕೂ ವಿಶ್ವವಿದ್ಯಾಲಯದಲ್ಲಿ ಕಲಿಯುವ ಶಿಕ್ಷಣಕ್ಕೂ ಸಂಬಂಧವೇ ಇಲ್ಲವಾಗಿದೆ. ಮಕ್ಕಳನ್ನು ಕತ್ತಲೆಯತ್ತ ದೂಡುತ್ತಿದ್ದೇವೆ. ಹಿಂದಿನ ಕೆಲಸವೇ ಈಗಲೂ ನಡೆಯುತ್ತಿದೆ ಎಂದು ನುಡಿದರು.
ನೆಲ ಪಠ್ಯವು ಮುಂದಿನ ದಾರಿಯನ್ನು ಕಂಡುಕೊಳ್ಳಲು ಸಹಕಾರಿ ಆಗುವಂತಿರಬೇಕು, ಜೀವನ ರೂಪಿಸಿಕೊಳ್ಳುವಂತಿರಬೇಕು. ಸುಭ್ರದ ಬದುಕು ಕಟ್ಟಿಕೊಡುವಂತಿರಬೇಕು ಎಂದು ಸಲಹೆ ನೀಡಿದರು.
ಆದಿಮ ಟ್ರಸ್ಟಿ ಪದ್ಮಾಲಯ ನಾಗರಾಜ್ ನೆಲ ಪಠ್ಯಗಳ ರಚನೆ ಕುರಿತು ಮಾತನಾಡಿದರು. ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ, ಆದಿಮ ಉಪಾಧ್ಯಕ್ಷ ಮಾರ್ಕಂಡೇಯ ಎಂ. ಇದ್ದರು. ಆದಿಮ ಆಡಳಿತಾಧಿಕಾರಿ ರಮೇಶ್ ಅಗ್ರಹಾರ ಕಾರ್ಯಕ್ರಮ ನಿರ್ವಹಸಿದರು. ನಾವೆಂಕಿ ಕೋಲಾರ ವಂದನಾರ್ಪಣೆ ನಡೆಸಿಕೊಟ್ಟರು. ಆದಿಮ ರಂಗ ಶಿಕ್ಷಣ ವಿದ್ಯಾರ್ಥಿಗಳು ಥಾಲಿ ನೃತ್ಯ ಹಾಗೂ ಆಫ್ರಿಕನ್ ಜಂಬೂ ನೃತ್ಯ ಪ್ರದರ್ಶಿಸಿದರು.
ಭಾನುವಾರ ರಾತ್ರಿ ಆದಿಮದಲ್ಲಿ ಹುಣ್ಣಿಮೆ ಹಾಡು–226 ಹಾಗೂ ಆದಿಮ ರಂಗ ತಂಡದ ಚಾಲನೆ ಕಾರ್ಯಕ್ರಮ ನಡೆಯಿತು.
ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಹುಣ್ಣಿಮೆ ಹಾಡು, ಮಕ್ಕಳ ಚುಕ್ಕಿ ಮೇಳ, ನೆಲದ ಸ್ಥಳೀಯ ವಿವಿದ ಜಾನಪದ ಕಲಾ ಪ್ರಕಾರಗಳನ್ನು ನಿರಂತರವಾಗಿ ಎರಡು ದಶಕಗಳಿಂದ ನಡೆಸಿಕೊಂಡು ಬಂದಿದ್ದೇವೆ. ಇದಕ್ಕೆ ಅನೇಕರು ಜೊತೆಯಾಗಿ ಸಹಕಾರ ನೀಡಿದ್ದಾರೆ. ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತಂದು ಅವರನ್ನು ಕಲಾವಿದರಾಗಿ ರೂಪಿಸುವ ಕೆಲಸ ಮಾಡಲಾಗುತ್ತಿದೆ. ಆ ದೃಷ್ಟಿಯಿಂದಲೇ ನೆಲಪಠ್ಯಗಳ ರಚನಾ ಕಮ್ಮಟಗಳನ್ನು ಆದಿಮ ಹಮ್ಮಿಕೊಂಡಿದೆ’ ಎಂದರು.
ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಕೆ.ಎನ್.ರಾಮ್ ಮೋಹನ್ ಹಾಗೂ ವಿತರಕ ಬಿ.ಆರ್.ರಮೇಶ್ ಮಾತನಾಡಿದರು.
ಇಲ್ಲಿನ ವಾತಾವರಣ ಮತ್ತು ಕೇಂದ್ರ ಬೆಳೆಯುತ್ತಿರುವುದನ್ನು ಗಮನಿಸಿದಾಗ ಹೆಗ್ಗೋಡಿನ ನೀನಾಸಂ ಕೇಂದ್ರ ನೆನಪಿಗೆ ಬರುತ್ತದೆ. ಅಲ್ಲಿನಂತೆ ಇಲ್ಲಿಯೂ ರಂಗಭೂಮಿ ಮೂಲಕ ಪ್ರೀತಿ ಸಿಗಬಹುದು ಎನಿಸುತ್ತದೆ. ಒಂದು ವಸತಿ ಗೃಹದ ಸಂಬಂಧ ನನ್ನ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದಷ್ಟು ಬೇಗ ನಾವು ವಸತಿಗೃಹ ನಿರ್ಮಿಸಿ ಮಾಡಿಸಿಕೊಡುತ್ತೇವೆ ಎಂದರು.
ನಂತರ ಜ್ಞಾನ ದೇಗುಲ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು. ಜನಪದರು ಸಾಂಸ್ಕೃತಿಕ ವೇದಿಕೆ ತಂಡ ಪ್ರಸ್ತುತಪಡಿಸಿತು.
ಕೆ.ವಿ.ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಆದಿಮ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಜಗದೀಶ್ ಆರ್.ಜಾಣೆ ವಂದನಾರ್ಪಣೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.