ADVERTISEMENT

ಉತ್ತರ ವಿ.ವಿ ಕುಲಪತಿ ಹುದ್ದೆಗೆ ಭಾರಿ ಲಾಬಿ!

ಮೈಸೂರು, ಬೆಂಗಳೂರು ಸೇರಿ ವಿವಿಧ ವಿ.ವಿಗಳ 70ಕ್ಕೂ ಅಧಿಕ ಪ್ರೊಫೆಸರ್‌ಗಳ ಕಣ್ಣು

ಕೆ.ಓಂಕಾರ ಮೂರ್ತಿ
Published 3 ಡಿಸೆಂಬರ್ 2025, 6:43 IST
Last Updated 3 ಡಿಸೆಂಬರ್ 2025, 6:43 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಚೇರಿ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಚೇರಿ   

ಕೋಲಾರ: ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಭಾರಿ ಲಾಬಿ ನಡೆಯುತ್ತಿದ್ದು ಮೈಸೂರು, ಬೆಂಗಳೂರು, ಧಾರವಾಡ, ಮಂಗಳೂರು ವಿಶ್ವವಿದ್ಯಾಲಯಗಳು ಸೇರಿದಂತೆ 70ಕ್ಕೂ ಅಧಿಕ ಪ್ರೊಫೆಸರ್‌ಗಳು ಕಣ್ಣಿಟ್ಟಿದ್ದಾರೆ.

ಈವರೆಗೆ ಕುಲಪತಿ ಆಗಿದ್ದ ಪ್ರೊ.ನಿರಂಜನ ವಾನಳ್ಳಿ ಅವರು ನ.30ರಂದು ತಮ್ಮ ನಾಲ್ಕು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸಿ ಮಾತೃ ಇಲಾಖೆಗೆ ಮರಳಿದ್ದಾರೆ. ಅದಕ್ಕೂ ಮೊದಲೇ ಅಂದರೆ ಅಕ್ಟೋಬರ್‌ 14ರಂದು ಉನ್ನತ ಶಿಕ್ಷಣ ಇಲಾಖೆಯು ಈ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿಗೆ ಪ್ರಕಟಣೆ ಹೊರಡಿಸಿತ್ತು. ಅರ್ಜಿ ಸಲ್ಲಿಕೆಗೆ 30 ದಿನಗಳ ಅವಕಾಶ ನೀಡಿತ್ತು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವಿಶ್ರಾಂತ ಕುಲಪತಿ ಪ್ರೊ.ಕರಿಸಿದ್ದಪ್ಪ ನೇತೃತ್ವದ ನಾಲ್ವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ.

ADVERTISEMENT

70ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆ ಆಗಿವೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈ ಅರ್ಜಿಗಳನ್ನು ಪರಿಶೀಲಿಸಲು ಶೋಧನಾ ಸಮಿತಿಯ ಸಭೆ ಡಿ.4ರಂದು ನಡೆಯಲಿದೆ.

ಕುಲಪತಿ ಅವಧಿ 4 ವರ್ಷಗಳದ್ದಾಗಿದ್ದು, ನಿವೃತ್ತಿ ವಯೋಮಿತಿಯನ್ನು 67 ವರ್ಷಕ್ಕೆ ನಿಗದಿಪಡಿಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕನಿಷ್ಠ 10 ವರ್ಷ ಕೆಲಸ ಮಾಡಿದವರನ್ನು ಪರಿಗಣಿಸಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ವಾಮಮಾರ್ಗದ ಮೂಲಕ ಪ್ರಭಾವ ಬೀರಲು ಪ್ರಯತ್ನಿಸುವ ವ್ಯಕ್ತಿಗಳ ಅರ್ಜಿಗಳನ್ನು ರದ್ದುಗೊಳಿಸಲಾಗುವುದು ಎಂಬ ಅಂಶ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ್ದ ಪ್ರಕಟಣೆಯಲ್ಲಿ ಇದೆ.

ಆದರೆ, ಈಗಾಗಲೇ ದೊಡ್ಡ ಮಟ್ಟದಲ್ಲಿ ಲಾಬಿ, ಕಸರತ್ತು ಆರಂಭವಾಗಿದೆ. ಕೆಲವರು ಕೇಂದ್ರ ಸರ್ಕಾರ ಮಟ್ಟದಿಂದಲೂ, ಕೆಲವರು ರಾಜ್ಯಪಾಲರ ಮೂಲಕವೂ, ಇನ್ನು ಕೆಲವರು ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಭಾವ ಬಳಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಜಾತಿ ಕಾರ್ಡ್‌ ಹಾಗೂ ಹಣದ ಪ್ರಭಾವ ಬೀರಲೂ ಯತ್ನಿಸುತ್ತಿರುವುದು ಗೊತ್ತಾಗಿದೆ. ಲಿಂಗಾಯತ, ಕುರುಬ, ಒಕ್ಕಲಿಗ ಹಾಗೂ ಬಲಿಜ ಸಮುದಾಯದ ತಲಾ ಒಬ್ಬರು ಈಗಾಗಲೇ ಸಂಬಂಧಪಟ್ಟವರ ಮೂಲಕ ಲಾಬಿ ನಡೆಸುತ್ತಿರುವುದು ತಿಳಿದುಬಂದಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ 2017ರಲ್ಲಿ ಆರಂಭವಾಯಿತು. ಇದರ ಮೊದಲ ಕುಲಪತಿಯಾಗಿ ಪ್ರೊ.ಕೆಂಪರಾಜು ಕಾರ್ಯನಿರ್ವಹಿಸಿದ್ದರು. ನಂತರ ಪ್ರೊ.ವಾನಳ್ಳಿ ಕುಲಪತಿ ಆಗಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಅಮರಾವತಿಯಲ್ಲಿ ಹೊಸದಾಗಿ ಕ್ಯಾಂಪಸ್‌ ನಿರ್ಮಿಸಲಾಗುತ್ತಿದೆ. ಕೋಲಾರದ ಮಂಗಸಂದ್ರದಲ್ಲಿರುವ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿಯೂ ಆಗಿರುವ ಪ್ರೊ.ಡಿ.ಕುಮುದಾ ಸದ್ಯ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶೋಧನಾ ಸಮಿತಿ ಸಭೆ ನಾಳೆ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಮೂವರು ಹೆಸರನ್ನು ಶಿಫಾರಸು ಮಾಡಲು ರಚಿಸಿರುವ ಶೋಧನಾ ಸಮಿತಿ ಸಭೆ ಡಿ.4ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕುಲಪತಿ ಹುದ್ದೆ ಬಯಸಿ ಸಲ್ಲಿಕೆಯಾಗಿರುವ 70ಕ್ಕೂ ಅಧಿಕ ಅರ್ಜಿಗಳನ್ನು ಈ ಸಮಿತಿ ಸದಸ್ಯರು ಪರಿಶೀಲನೆ ನಡೆಸಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಿದ್ದಾರೆ. ಈ ಪಟ್ಟಿಯನ್ನು ಸರ್ಕಾರ ರಾಜ್ಯಪಾಲರ ಅನುಮೋದನೆಗಾಗಿ ಸಲ್ಲಿಸಲಿದ್ದು ಮೂವರಲ್ಲಿ ಒಬ್ಬರ ಹೆಸರನ್ನು ಕುಲಪತಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಈ ಸಮಿತಿಯನ್ನು ನ.7ರಂದು ರಚಿಸಲಾಗಿತ್ತು.

ಶೋಧನಾ ಸಮಿತಿಯಲ್ಲಿ ಯಾರಿದ್ದಾರೆ?

ಶೋಧನಾ ಸಮಿತಿಯಲ್ಲಿ ನಾಲ್ವರು ಸದಸ್ಯರಿದ್ದು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವಿಶ್ರಾಂತ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಅವರನ್ನೇ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಯುಜಿಸಿ ಪ್ರತಿನಿಧಿಯಾಗಿ ಹೈದರಾಬಾದ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಸುತ್ಕರ್‌ ಜಗದೀಶ್ವರ ರಾವ್‌ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ರಾಜ್ಯಪಾಲರ ಪ್ರತಿನಿಧಿಯಾಗಿ ಮಧ್ಯಪ್ರದೇಶದ ಮಹಾರಾಜ ಛತ್ರಶಾಲಾ ಬುಂದೇಲಖಂಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಆರ್‌.ಥಾಪಕ್‌ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಸಿಂಡಿಕೇಟ್‌ ಪ್ರತಿನಿಧಿಯಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ರಾಮಚಂದ್ರೇಗೌಡ ಇದ್ದಾರೆ. ಉನ್ನತ ಶಿಕ್ಷಣ ಇಲಾಖೆ ಉಪಕಾರ್ಯದರ್ಶಿ ಜಿ.ಶಶಿಧರ್‌ ಈ ಸಮಿತಿಯ ಸಮನ್ವಯಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.