ಕೋಲಾರ: ‘ವೇಮಗಲ್ –ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆ ಸೋಲಿಗೆ ಕಾಂಗ್ರೆಸ್ ನಿರಾಸೆ ಪಡಬೇಕಾಗಿಲ್ಲ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಯಾರನ್ನು ಹೊಣೆಗಾರಿಕೆ ಮಾಡುವುದು ಬೇಡ’ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ವೇಮಗಲ್ ಪಟ್ಟಣದಲ್ಲಿನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರ ನಿವಾಸದಲ್ಲಿ ಭಾನುವಾರ ಪಟ್ಟಣ ಪಂಚಾಯಿತಿ ಚುನಾವಣೆ ಸೋಲಿಗೆ ಸಂಬಂಧಿಸಿದಂತೆ ನಡೆದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
‘ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂದುಕೊಂಡು ಮುನ್ನಡೆಯಬೇಕು. ನಮ್ಮನ್ನೂ ಗೆಲುವಿನ ಅಂಚಿಗೆ ತಂದು ನಿಲ್ಲಿಸಿರುವ ಜನತೆಗೆ ಹೃದಯಪೂರ್ವಕ ಧನ್ಯವಾದಗಳು. ಅವರು ನೀಡಿರುವ ಧೈರ್ಯ, ಬೆಂಬಲ ಮುಂದಿನ ಗೆಲುವಿಗೆ ಮುನ್ನುಡಿಯಾಗಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಯಾವುದೇ ಕಾರಣಕ್ಕೂ ಕುಗ್ಗದೆ ಈ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂಬರುವ ಚುನಾವಣೆಗೆ ಪಕ್ಷವನ್ನು ಸಂಘಟಿಸಬೇಕು. ಜೊತೆಗೆ ಎರಡು ತಿಂಗಳಿಗೊಮ್ಮೆ ತಮ್ಮ ವಾರ್ಡ್‌ಗಳಲ್ಲಿಯೇ ಮುಖಂಡರು, ಕಾರ್ಯಕರ್ತರ ಸಭೆ ಮಾಡಿ ಪಕ್ಷವನ್ನು ಸಂಘಟಿಸಿ ಅಭಿವೃದ್ಧಿಗಾಗಿ ಕೆಲಸ ಮಾಡೋಣ’ ಎಂದರು
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಚುನಾವಣೆಯಲ್ಲಿ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯಲಾಗಿತ್ತು. ಜೊತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಕೈ ಹಿಡಿಯಲಿವೆ ಎಂದು ಭಾವಿಸಲಾಗಿತ್ತು. ಆದರೂ ಸೋಲುಂಟಾಗಿದೆ. ಸೋತವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಕಾಂಗ್ರೆಸ್ ಸರ್ಕಾರ ತಮ್ಮ ಜೊತೆಗೆ ಇದೆ. ಈ ಚುನಾವಣೆಯಲ್ಲಿ ನಮ್ಮ ಜೊತೆ ಹಗಲಿರುಳೆನ್ನದೆ ಶ್ರಮಿಸಿದವರಿಗೆ ಧನ್ಯವಾದಗಳು. ಅಭಿವೃದ್ಧಿಗೆ ಕೈ ಜೋಡಿಸೋಣ’ ಎಂದು ಹೇಳಿದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ‘ಜನರ ಸೇವೆ ಮಾಡಲು ಅಧಿಕಾರವೊಂದೇ ಮಾನದಂಡವಲ್ಲ. ಕಾಂಗ್ರೆಸ್ ಚುನಾವಣೆಯ ಫಲಿತಾಂಶದಲ್ಲಿ ಸೋತಿರಬಹುದು ಆದರೆ ಈ ಸೋಲು ನಮ್ಮಲ್ಲಿನ ಆತ್ಮಸ್ಥೈರ್ಯ ಹೆಚ್ಚಿಸಿದೆ. ಸೋಲಿಗೆ ಏನು ಕಾರಣವಾಯಿತು, ಏನು ಮಾಡಬೇಕಾಗಿತ್ತು, ಎಲ್ಲಿ ಎಡವಿದ್ದೇವೆ, ಮುಂದೆ ಯಾವ ವಿಚಾರಗಳನ್ನು ಸರಿಪಡಿಸಿಕೊಳ್ಳಬೇಕು. ಮುಂದೆ ಪ್ರತಿ ವಾರ್ಡ್‌ನಲ್ಲಿ ಏಳೆಂಟು ಜನರ ಸಮಿತಿ ಮಾಡಿ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗೆ ನಿರಂತರವಾಗಿ ಸಭೆ ಮಾಡೋಣ’ ಎಂದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಮುಖಂಡರಾದ ನಾಗನಾಳ ಸೋಮಣ್ಣ, ಖಾದ್ರಿಪುರ ಬಾಬು, ಕುರಬರಹಳ್ಳಿ ಕುಮಾರ್, ಮಡಿವಾಳ ಮುನಿರಾಜು, ಮೈಲಾಂಡಹಳ್ಳಿ ಮುರಳಿ, ಪೆರ್ಜೇನಹಳ್ಳಿ ನಾಗೇಶ್, ಪಟ್ಟಣ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಸದಸ್ಯರಾದ ಅಂಜಲಿ ಪ್ರಕಾಶ್, ಗಂಗಪ್ಪ, ಮಡಿವಾಳ ಮಂಜುಳಾ, ತಾಸುಫ್ ಖಾನ್, ದೀಪಾ, ಶಶಿಕಲಾ ಹಾಗೂ ಪರಾಜಿತ ಅಭ್ಯರ್ಥಿಗಳು ಇದ್ದರು.
ವಿಧಾನಸಭೆ, ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಮತ ಲಭಿಸಿವೆ 17 ವಾರ್ಡ್ ಪೈಕಿ 6 ಸ್ಥಾನ ಪಡೆದಿದ್ದ ಕಾಂಗ್ರೆಸ್ ಬಿಜೆಪಿ–ಜೆಡಿಎಸ್‌ಗೆ 10 ಸ್ಥಾನ, ಒಬ್ಬರು ಪಕ್ಷೇತರರಿಗೆ ಜಯ
ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ ‘ಚುನಾವಣೆಯ ಪೂರ್ವದಲ್ಲಿ ಹೇಳಿದ ಅಷ್ಟು ಅಭಿವೃದ್ಧಿ ಕೆಲಸಗಳನ್ನೂ ಮಾಡತ್ತೇವೆ. ಕಾಂಗ್ರೆಸ್ ಸೋತಿದ್ದು ಅಭಿವೃದ್ಧಿ ಮಾಡಲ್ಲ ಎಂಬುದಾಗಿ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಯಾರೂ ಕಿವಿಕೊಡಬೇಡಿ. ನಾವು ತಮ್ಮೊಂದಿಗೆ ಇದ್ದೇವೆ. ಸೋತವರಿಗೂ ಹಾಗೂ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರಿಗೆ ಬೇರೆ ಬೇರೆ ಅವಕಾಶಗಳನ್ನು ನೀಡಲಾಗುತ್ತದೆ. ಯಾರೂ ಧೃತಿಗೆಡುವ ಅವಶ್ಯವಿಲ್ಲ’ ಎಂದು ಕೊತ್ತೂರು ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.