ADVERTISEMENT

ಕೋಲಾರ | ವೇಮಗಲ್‌–ಕುರುಗಲ್‌ ಪಟ್ಟಣ ಪಂಚಾಯಿತಿ ಜೆಡಿಎಸ್-ಬಿಜೆಪಿ ಮೈತ್ರಿ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:06 IST
Last Updated 20 ಆಗಸ್ಟ್ 2025, 5:06 IST
   

ಕೋಲಾರ: ಬಹಳ ಕುತೂಹಲ ಮೂಡಿಸಿದ್ದ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳು ಜಯಭೇರಿ ಬಾರಿಸಿವೆ.

ಒಟ್ಟು 17 ವಾರ್ಡ್‌ಗಳ ಪೈಕಿ ಬಿಜೆಪಿ-ಜೆಡಿಎಸ್ 10 ಸ್ಥಾನ ಪಡೆದಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾದ ಬಹುಮತ ಗಳಿಸಿವೆ. ಸರಳ ಬಹುಮತಕ್ಕೆ 9 ಸ್ಥಾನ ಬೇಕಿತ್ತು. ಕಾಂಗ್ರೆಸ್‌ ಪಕ್ಷ ಕೇವಲ 6 ಸ್ಥಾನ ಜಯಿಸಿದ್ದು, ಒಂದು ಸ್ಥಾನ ಪ್ರಕ್ಷೇತರರ ಪಾಲಾಗಿದೆ.

ಬಿಜೆಪಿ ಸ್ಪರ್ಧಿಸಿದ್ದ 9 ವಾರ್ಡ್‌ಗಳ ಪೈಕಿ 6ರಲ್ಲಿ ಗೆಲುವು ಸಾಧಿಸಿ ಪಾರಮ್ಯ ಮೆರೆಯಿತು‌‌‌. ಮೈತ್ರಿ ಪಕ್ಷ ಜೆಡಿಎಸ್‌ ಸ್ಪರ್ಧಿಸಿದ್ದ 8 ವಾರ್ಡ್‌ಗಳಲ್ಲಿ 4ರಲ್ಲಿ ಜಯ ಸಾಧಿಸಿತು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ 17 ವಾರ್ಡ್‌ಗಳಲ್ಲೂ ಸ್ಪರ್ಧಿಸಿದ್ದರೂ ಹಿನ್ನಡೆ ಅನುಭವಿಸಿತು.

ADVERTISEMENT

ಮತ ಎಣಿಕೆಯು ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಕೋಲಾರ ನಗರದ ಬಾಲಕಿಯರ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಿತು. 9.30ರ ಸುಮಾರಿಗೆ ಎಲ್ಲಾ 17 ಸ್ಥಾನಗಳ ಫಲಿತಾಂಶ ಹೊರ ಬಂತು. ಕೇವಲ ಒಂದು ಕೊಠಡಿಯಲ್ಲಿ ಮತ ಎಣಿಕೆ ನಡೆಯಿತು.

ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಮೇಲೆ‌ ಇದೇ ಮೊದಲ ಬಾರಿ ನಡೆದ ಚುನಾವಣೆಯಲ್ಲಿ ಒಟ್ಟು 51 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಒಟ್ಟು 13,499 ಮತದಾರರ ಪೈಕಿ 12,494 ಮಂದಿ ಮತದಾನ ಮಾಡಿದ್ದರು. ಈ ಪೈಕಿ 6,312 ಮಹಿಳೆಯರು ಮತದಾನ ಮಾಡಿದ್ದರೆ, 6,182 ಪುರುಷರು ಮತ ಚಲಾಯಿಸಿದ್ದರು. ಆ.17ರಂದು ಮತದಾನ ನಡೆದಿದ್ದು, ಶೇ 92.56ರಷ್ಟು ಮತದಾನವಾಗಿತ್ತು.

ವೇಮಗಲ್‌ನಿಂದ ಮತ ಎಣಿಕೆ ಕೇಂದ್ರಕ್ಕೆ ಬುಧವಾರ ಬೆಳಿಗ್ಗೆ ಬಂದಿದ್ದ ಅಭ್ಯರ್ಥಿಗಳು ತಮ್ಮ ಫಲಿತಾಂಶ ಏನಾಗುತ್ತದೋ ಎಂದು ತಳಮಳಕ್ಕೆ ಒಳಗಾಗಿದ್ದರು. ಮೊದಲಿಗೆ ಕಾಂಗ್ರೆಸ್‌ ಒಂದೆರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ–ಜೆಡಿಎಸ್‌ ಮುಖಂಡರಿಗೆ ಢವಢವ ಶುರುವಾಯಿತು. ನಂತರ ಮುನ್ನಡೆ ಸರದಿ ಬಿಜೆಪಿ–ಜೆಡಿಎಸ್‌ನದ್ದು. ಕೊನೆಯವರೆಗೆ ಮುನ್ನಡೆ ಉಳಿಸಿಕೊಂಡರು.

ಎರಡು ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅಲ್ಪ ಮತಗಳಿಂದ ಸೋಲು ಕಂಡಿದ್ದಾರೆ. ವಾರ್ಡ್‌ 13ರಲ್ಲಿ ಸ್ವತಂತ್ರ ಅಭ್ಯರ್ಥಿ ಶಿಲ್ಪಾ ಬಿಜೆಪಿಯ ಲಲಿತಮ್ಮ ವಿರುದ್ಧ ಕೇವಲ 16 ಮತಗಳಿಂದ ಗೆದ್ದರು.

ವಾರ್ಡ್‌ 1ರಲ್ಲಿ ಕಾಂಗ್ರೆಸ್‌ನ ಅಂಜಲಿ ಪ್ರಕಾಶ್‌, ಬಿಜೆಪಿಯ ಶ್ವೇತಾ ಎದುರು ಕೇವಲ 17 ಮತಗಳಿಂದ ಜಯ ಗಳಿಸಿದರು. ವಾರ್ಡ್‌ 7ರ ಕಾಂಗ್ರೆಸ್‌ ಅಭ್ಯರ್ಥಿ ಮಂಜುಳಾ, ಜೆಡಿಎಸ್‌ನ ಮಮತಾ ಎದುರು 203 ಮತಗಳಿಂದ ಗೆದ್ದರು. ಇದು ಅತಿ ಹೆಚ್ಚು ಮತಗಳ ಅಂತರದ ಗೆಲುವಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಜಿಲ್ಲಾಧಿಕಾರಿ ಎಂ.ಆರ್‌.ರವಿ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಜೊತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ, ತಹಶೀಲ್ದಾರ್‌ ಡಾ.ನಯನಾ ಇದ್ದರು.

ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಗೆದ್ದ ಅಭ್ಯರ್ಥಿಗಳು ಕೋಲಾರ ಹಾಗೂ ವೇಮಗಲ್‌ನಲ್ಲಿ ವಿಜಯೋತ್ಸವ ಆಚರಿಸಿದರು.

‘ನೋಟಾ’ಗೆ 40 ಮತ

ವೇಮಗಲ್‌–ಕುರುಗಲ್‌ ಪಟ್ಟಣ ಪಂಚಾಯಿತಿಯಲ್ಲಿ ‘ನೋಟಾ’ಗೂ ಅವಕಾಶ ನೀಡಲಾಗಿತ್ತು. ಅದರಂತೆ 17 ವಾರ್ಡ್‌ಗಳಲ್ಲಿ ಒಟ್ಟು 40 ಮಂದಿ ‘ನೋಟಾ’ಗೆ ಮತ ಚಲಾಯಿಸಿದ್ದಾರೆ. ಯಾವೊಬ್ಬ ಅಭ್ಯರ್ಥಿ ಮೇಲೂ ತಮಗೆ ಒಲವು ಇಲ್ಲ ಎಂಬುದನ್ನು 40 ಮತದಾರರು ನೋಟಾ ಪ್ರಯೋಗ ಮೂಲಕ ತೋರಿಸಿದ್ದಾರೆ.

ಏಕೈಕ ಪಕ್ಷೇತರ ಅಭ್ಯರ್ಥಿಗೆ ಜಯ

ವೇಮಗಲ್‌–ಕುರುಗಲ್‌ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 13 ಮಂದಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಅವರಲ್ಲಿ ಒಬ್ಬರಿಗೆ ಮಾತ್ರ ಗೆಲುವು ಒಲಿದಿದೆ. ವೇಮಗಲ್ ಎ-1 ಬ್ಲಾಕ್‌ ವಾರ್ಡ್‌ನಿಂದ (ಸಾಮಾನ್ಯ ಮಹಿಳೆ) ಸ್ಪರ್ಧಿಸಿದ್ದ ಶಿಲ್ಪಾ ಶಿವಶಂಕರ್ ಜಯ ಗಳಿಸಿದ್ದಾರೆ. ಅವರಿಗೆ ಬಿಜೆಪಿ–ಜೆಡಿಎಸ್‌ ಮೈತ್ರಿ ಹಾಗೂ ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧೆ ಎದುರಾಗಿತ್ತು. 265 ಮತ ಪಡೆದು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ಹಿಮ್ಮೆಟ್ಟಿಸಿದ್ದಾರೆ.

‘ಈ ಗೆಲುವನ್ನು ನಾನು ನಿರೀಕ್ಷಿಸಿರಲಿಲ್ಲ. ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು. ಬಿಜೆಪಿಯ ಲಲಿತಮ್ಮ ಮುನಿಯಪ್ಪ 249 ಮತ ಪಡೆದರೆ, ಕಾಂಗ್ರೆಸ್‌ನ ಮಂಜುಳಾ ಸುರೇಶ್ 228 ಮತ ಗಳಿಸಿದ್ದಾರೆ. ಈ ವಾರ್ಡ್‌ನಲ್ಲಿ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಹಾಗೂ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯೂ ಕಣದಲ್ಲಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.