ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿ–ಜೆಡಿಎಸ್‌ನ ವಿಜಯೋತ್ಸವ
ಕೋಲಾರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಬಿಜೆಪಿಯ ವರ್ತೂರು ಪ್ರಕಾಶ್ ಹಾಗೂ ಜೆಡಿಎಸ್‌ನ ಸಿಎಂಆರ್ ಶ್ರೀನಾಥ್ ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿಕೂಟವನ್ನು ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡಂತಿದೆ.
2023ರ ಚುನಾವಣೆಯಲ್ಲಿ ಕಡೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದ ಕೊತ್ತೂರು ಮಂಜುನಾಥ್ ಕೇವಲ 20 ದಿನ ಪ್ರಚಾರ ನಡೆಸಿ ಗೆದ್ದು ಶಾಸಕರಾಗಿದ್ದರು. ಕ್ಷೇತ್ರದಲ್ಲಿ ವರ್ಷದಿಂದ ಪ್ರಚಾರ ನಡೆಸಿದ್ದ ಸಿಎಂಆರ್ ಶ್ರೀನಾಥ್ ಹಾಗೂ ಹಿಂದೆ ಪಕ್ಷೇತರರಾಗಿ ಗೆದ್ದು ಬಿಜೆಪಿಯಿಂದ ಕಣಕ್ಕಿಳಿದಿದ್ದ ವರ್ತೂರು ಪ್ರಕಾಶ್‌ಗೆ ಶಾಕ್ ನೀಡಿದ್ದರು.
ಆ ಸೇಡು ತೀರಿಸಿಕೊಳ್ಳಲು ಇವರಿಬ್ಬರು ಕಾಯುತ್ತಿದ್ದರು. 2024ರಲ್ಲಿ ಜೆಡಿಎಸ್–ಬಿಜೆಪಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಿ ಯಶಸ್ಸು ಕಂಡಿದ್ದವು. ಅದಕ್ಕಿಂತ ಮುಖ್ಯವಾಗಿ ತಮ್ಮ ಸೋಲಿಗೆ ಪ್ರತೀಕಾರಕ್ಕೆ ಕಾಯ್ದಿದ್ದರು.
ಹೀಗಾಗಿ, ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಭಾರಿ ಕುತೂಹಲ ಮೂಡಿಸಿತ್ತು. ಅದರಲ್ಲಿ ಮೈತ್ರಿಕೂಟ 10 ಸ್ಥಾನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಕೇವಲ ಆರು ಸ್ಥಾನ ಗೆದ್ದ ‘ಕೈ’ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
ಸಹಜವಾಗಿಯೇ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ವರ್ತೂರು ಪ್ರಕಾಶ್, ಸಿಎಂಆರ್ ಶ್ರೀನಾಥ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಅವರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದರು. ಕಳೆದ ಒಂದು ತಿಂಗಳಿನಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ಕಾಂಗ್ರೆಸ್ ಪಕ್ಷದವರು ಐದು ಗ್ಯಾರಂಟಿಗಳ ಹೆಸರಿನಲ್ಲೇ ಮತಯಾಚಿಸಿದ್ದರು. ಇತ್ತ ಮೈತ್ರಿ ಪಕ್ಷದವರು ಗ್ಯಾರಂಟಿ ಯೋಜನೆ ಟೀಕಿಸುತ್ತಾ, ಶೂನ್ಯ ಅಭಿವೃದ್ಧಿ ಎಂದು ಆರೋಪಿಸುತ್ತ ಪ್ರಚಾರ ಮಾಡಿದ್ದರು. ಮೂರೂ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಪ್ರಚಾರ ನಡೆಸಿದ್ದವು.
ಕೊತ್ತೂರು ಹಾಗೂ ಅನಿಲ್ ಇಬ್ಬರೂ ‘ಜೋಡೆತ್ತಿ’ನಂತೆ ಕ್ಷೇತ್ರದಲ್ಲಿ ತಿರುಗಾಡಿದ್ದರು. ಜೊತೆಗೆ ವೇಮಗಲ್ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರನ್ನು ಕರೆಸಿ ಪ್ರಚಾರ ಸಭೆ ಕೂಡ ನಡೆಸಿದ್ದರು.
ಜೊತೆಗೆ ಮಾತಿನ ಏಟು ಹಾಗೂ ತಿರುಗೇಟು ಜೋರಾಗಿದ್ದವು. ಕೊತ್ತೂರು ಹಾಗೂ ಅನಿಲ್ ವಿಶೇಷವಾಗಿ ವರ್ತೂರು ಪ್ರಕಾಶ್ ಹಾಗೂ ಓಂಶಕ್ತಿ ಚಲಪತಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು. ಅಧಿಕಾರ ಇದ್ದಾಗ ಜೆಡಿಎಸ್–ಬಿಜೆಪಿ ಏನು ಮಾಡಿದ್ದರು ಎಂದು ಪ್ರಶ್ನಿಸಿದ್ದರು. ಇದಕ್ಕೆ ಮೈತ್ರಿ ಮುಖಂಡರು ತಿರುಗೇಟು ನೀಡಿದ್ದರು.
ಇನ್ನು ಓಂಶಕ್ತಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮೇಲೆ ನಡೆದ ಮೊದಲ ಚುನಾವಣೆ ಇದು. ಮೊದಲ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಏಕೆಂದರೆ ಸ್ಪರ್ಧಿಸಿದ್ದ 9 ಸ್ಥಾನಗಳಲ್ಲಿ ಬಿಜೆಪಿ 6ರಲ್ಲಿ ಗೆದ್ದಿದೆ. ಎರಡು ವಾರ್ಡ್‌ಗಳಲ್ಲಿ ಕೇವಲ 16 ಹಾಗೂ 17 ಮತಗಳ ಅಂತರದಲ್ಲಿ ಸೋತಿದೆ. ಜೆಡಿಎಸ್ ಎಂಟು ಸ್ಥಾನಗಳಲ್ಲಿ 4ರಲ್ಲಿ ಗೆದ್ದಿದೆ. ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಕೂಡ ಪ್ರಚಾರ ನಡೆಸಿದ್ದರು.
17 ಕ್ಷೇತ್ರದಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಕೇವಲ 6ರಲ್ಲಿ ಗೆದ್ದಿದೆ. ಟಿಕೆಟ್ ಘೋಷಣೆ ತಡ ಮಾಡಿದ್ದು ಮುಳುವಾದಂತಿದೆ. ಆ ಪಕ್ಷಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಕೈಕೊಟ್ಟಂತಿವೆ. ಅಲ್ಲದೇ, ಕೊನೆ ಕ್ಷಣದಲ್ಲಿ ಅಂದರೆ ಚುನಾವಣೆಯ ಸಮೀಪವಿದ್ದಾಗ ಆ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಜನರು ‘ಕೈ’ ಹಿಡಿದಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಒಳ ಜಗಳವೂ ಹಿನ್ನಡೆಗೆ ಕಾರಣವಾದಂತಿದೆ. ಇನ್ನು ಮತದಾರರು ಸ್ಥಳೀಯ ಅಭ್ಯರ್ಥಿಗಳ ವರ್ಚಸ್ಸು ನೋಡಿಕೊಂಡು ಮತ ಹಾಕಿರುವಂತಿದೆ.
ಸಂಘಟಿತ ಹೋರಾಟ: ವೇಮಗಲ್–ಕುರುಗಲ್ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಗೆಲುವಿಗೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿನಂದಿಸಿದ್ದಾರೆ. ಮುಖಂಡರು ಸಂಘಟಿತ ಹೋರಾಟದ ಮೂಲಕ ಗೆಲುವಿಗೆ ಶ್ರಮಿಸಿದ್ದಾರೆ ಎಂದಿದ್ದಾರೆ. ‘ಮುಂದಿನ ದಿನಗಳಲ್ಲಿ ಇದೇ ರೀತಿ ಸಹಕಾರ ಮುಂದುವರಿದರೆ ಚುನಾವಣೆಗಳಲ್ಲಿ ಮೈತ್ರಿ ಗೆಲುವು ನಿಶ್ಚಿತವಾಗಿರುತ್ತದೆ’ ಎಂದು ಜೆಡಿಎಸ್ ಎಂಎಲ್‌ಸಿ ಇಂಚರ ಗೋವಿಂದರಾಜು ಹೇಳಿದ್ದಾರೆ.
ಇಡೀ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಶುರುವಾಗಿದೆ. ಇದನ್ನು ಬರೆದಿಟ್ಟುಕೊಳ್ಳಿ. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಮೈತ್ರಿ ಪಕ್ಷಗಳ ಯಶಸ್ಸಿನ ಓಟ ಮುಂದುವರಿಯಲಿದೆಓಂಶಕ್ತಿ ಚಲಪತಿ ಬಿಜೆಪಿ ಜಿಲ್ಲಾಧ್ಯಕ್ಷ
ಕಾಂಗ್ರೆಸ್ ಸರ್ಕಾರದ 2 ವರ್ಷಗಳ ದುರಾಡಳಿತದ ಫಲವಿದು. ಜೆಡಿಎಸ್–ಬಿಜೆಪಿ ಮೈತ್ರಿ ಬಗೆಗೆ ಮತದಾರರ ಒಲವು ಇರುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ಮುಂದೆಯೂ ಗೆಲ್ಲುತ್ತೇವೆಸಿಎಂಆರ್ ಶ್ರೀನಾಥ್ ಜೆಡಿಎಸ್ ಮುಖಂಡ
ಳೀಯವಾಗಿ ಕಾಂಗ್ರೆಸ್ ಶಾಸಕರು ಎಂಎಲ್‌ಸಿ ಇದ್ದರೂ ಜನ ನಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ನಾವು ಕೈಬಿಟ್ಟ ಅಭ್ಯರ್ಥಿಗಳನ್ನು ಕರೆದೊಯ್ದು ಕಾಂಗ್ರೆಸ್‌ನವರು 6 ಸ್ಥಾನ ಗೆದ್ದಿದ್ದಾರೆವರ್ತೂರು ಪ್ರಕಾಶ್ ಮಾಜಿ ಸಚಿವ
‘ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದ ಕೆಲ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಸ್ಥಳೀಯ ಮುಖಂಡರು ಟಿಕೆಟ್ ನಿರಾಕರಣೆ ಮಾಡಿದರು. ಅಲ್ಲದೇ ಹಿರಿಯ ನಾಯಕ ಏಳು ಬಾರಿ ಸಂಸದರಾಗಿದ್ದ ಮುನಿಯಪ್ಪ ಅವರನ್ನೂ ಘಟಬಂಧನ್ ನಾಯಕರು ಕಡೆಗಣಿಸಿದರು. ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ’ ಎಂದು ಮುನಿಯಪ್ಪ ಬೆಂಬಲಿಗರು ಬೇಸರ ವ್ಯಕ್ತಪಡಿಸಿದರು.
‘ದಲಿತ ಶಾಸಕನಾದ ನನ್ನನ್ನು ಕಡೆಗಣಿಸಿ ವೇಮಗಲ್ ಚುನಾವಣೆ ನಡೆಸಿದ್ದಾರೆ. ಸೌಜನ್ಯಕ್ಕೂ ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ. ಅದರ ಪ್ರತಿಫಲ ಇವತ್ತು ಅನುಭವಿಸುತ್ತಿದ್ದಾರೆ. ನಾನು ಎಂಬ ಅಹಂನಿಂದ ಮೆರೆಯುವವರನ್ನು ಜನರು ಸಹಿಸುವುದಿಲ್ಲ’ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ. ‘ದಲಿತರು ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರನ್ನು ನಿರ್ಲಕ್ಷ್ಯ ಮಾಡಿದರೆ ಎಲ್ಲರಿಗೂ ಇದೇ ಗತಿ’ ಎಂದು ಹರಿಹಾಯ್ದಿದ್ದಾರೆ.
‘ಕೋಲಾರ ವಿಧಾನಸಭಾ ಕ್ಷೇತ್ರದ ಜೋಡೆತ್ತುಗಳಾದ ವರ್ತೂರು ಪ್ರಕಾಶ್ ಹಾಗೂ ಸಿಎಂಆರ್ ಶ್ರೀನಾಥ್ ಬಹಳಷ್ಟು ಶ್ರಮಿಸಿದ್ದಾರೆ. ಆದರೆ ಕಾಂಗ್ರೆಸ್‌ನವರು ಇವರಿಬ್ಬರ ನಡುವೆ ತಂದಿಡಲು ಪ್ರಯತ್ನಿಸಿದರು. ತಾಕತ್ತು ಧಮ್ಮು ಇದ್ದಿದ್ದರೆ ಅಭಿವೃದ್ಧಿ ಬಗ್ಗೆ ಮಾತನಾಡಬೇಕಿತ್ತು. ಅವರಿಗೆ ತಾಕತ್ತು ಧಮ್ಮು ಇಲ್ಲ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಟೀಕಾ ಪ್ರಹಾರ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.