ADVERTISEMENT

ಕೋಲಾರ: ಚುನಾವಣೆ ವೇಳೆ ರಾಜಕೀಯ ಮಾಡೋಣ

ಶಾಸಕ ವೆಂಕಟಶಿವಾರೆಡ್ಡಿ ಟೀಕಿಸಿದ್ದಕ್ಕೆ ಕಾಂಗ್ರೆಸ್‌ ನಾಯಕರಿಗೆ ಜೆಡಿಎಸ್‌ ಮುಖಂಡರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:07 IST
Last Updated 18 ಜುಲೈ 2025, 2:07 IST
ಶ್ರೀನಿವಾಸಪುರದಲ್ಲಿ ಗುರುವಾರ ಜೆಡಿಎಸ್‌ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಶ್ರೀನಿವಾಸಪುರದಲ್ಲಿ ಗುರುವಾರ ಜೆಡಿಎಸ್‌ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಶ್ರೀನಿವಾಸಪುರ: ‘ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿರುವ ಹಿರಿಯ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬಗ್ಗೆ ಕಾಂಗ್ರೆಸ್‌ನ ಕೆಲಸ ಮುಖಂಡರು ಅವಹೇಳನಕಾರಿಯಾಗಿ ಮಾತನಾಡಿದ್ದು, ಇದು ಯಾರಿಗೂ ಶೋಭೆ ತರಲ್ಲ. ಯಾವುದೇ ವಿಚಾರಗಳಿದ್ದರೆ ಆರೋಗ್ಯಕರ ಚರ್ಚೆ ನಡೆಯಬೇಕೇ ಹೊರತು ವೈಯಕ್ತಿಕವಾಗಿ ಅವಹೇಳನ ಮಾಡುವುದು ಸರಿ ಅಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಚೆಗೆ ಕಾಂಗ್ರೆಸ್‌ನ ಕೆಲ ಮುಖಂಡರು ಸುದ್ದಿಗೋಷ್ಠಿಯಲ್ಲಿ ಶಾಸಕರನ್ನು ಅವಹೇಳನ ಮಾಡಿರುವುದು ಖಂಡನೀಯ. ವೆಂಕಟಶಿವಾರೆಡ್ಡಿ ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದು, ರಾಜ್ಯದಲ್ಲಿ ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಹೆಚ್ಚಿನ ಅನುದಾನ ತರಲು ಸಾದ್ಯವಾಗದಿದ್ದರೂ ತಮ್ಮ ಶಕ್ತಿ ಮೀರಿ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ’ ಎಂದರು.

‘ತಾಲ್ಲೂಕಿನ ಪ್ರಮುಖ ರಸ್ತೆಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಯಾವುದೇ ಗುತ್ತಿಗೆದಾರರಿಂದ ಅಥವಾ ಸರ್ಕಾರಿ ಅಧಿಕಾರಿಗಳಿಂದ ಕಮಿಷನ್ ಪಡೆಯುತ್ತಿರುವ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಅದನ್ನು ಬಿಟ್ಟು ಸುಖಾಸುಮ್ಮನೆ ಆರೋಪ ಮಾಡುವುದು ಶೋಭೆ ತರುವುದಿಲ್ಲ’ ಎಂದು ಹೇಳಿದರು.

ADVERTISEMENT

‘ತಾಲ್ಲೂಕಿನಲ್ಲಿ ಬಡವರಿಗೆ ಮತ್ತು ದಲಿತರಿಗಾಗಿ 300ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಯಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗುತ್ತಿದೆ. ಜೊತೆಗೆ ಕೈಗಾರಿಕಾ ವಲಯ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ. ಮಾವಿನ ಬೆಲೆ ಕುಸಿತ ಉಂಟಾದಾಗ ಶಾಸಕರು ಮುಖ್ಯಮಂತ್ರಿ, ಸಚಿವರಿಗೆ ನಿರಂತರವಾಗಿ ಮನವಿ ಮಾಡಿದರೂ ಯಾರೂ ಗಮನಹರಿಸಲಿಲ್ಲ. ಆಗ ವಿಧಾನಸೌಧ ಬಳಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದರು. ಕುಮಾರಸ್ವಾಮಿ ಕೇಂದ್ರ ಕೃಷಿ ಮಂತ್ರಿಗೆ ಪತ್ರ ಬರೆದು ಮಾವು ಬೆಳೆಗಾರರ ನೆರವಿಗೆ ಬರುವಂತೆ ಒತ್ತಡ ಹಾಕಿದಾಗ ಸ್ಪಂದನೆ ಸಿಕ್ಕಿತು. ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಿದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿಯಿತು’ ಎಂದು ಟೀಕಿಸಿದರು.

‘ಹಿಂದಿನ ಶಾಸಕರು ತಾಲ್ಲೂಕಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಹೈಟೆಕ್ ಆಸ್ಪತ್ರೆ ಮಾಡಲು ಮುಂದಾದಾಗ ಜೆಡಿಎಸ್ ಪಕ್ಷದ ನಾಯಕರು ನ್ಯಾಯಾಲಯ ಮೊರೆ ಹೋಗಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಅಂತಹ ಯಾವುದೇ ದಾಖಲೆಗಳಿದ್ದರೆ ಬಹಿರಂಗಪಡಿಸಲಿ’ ಎಂದು ಸವಾಲೆಸೆದರು.

‘ತಾಲ್ಲೂಕಿನ ಜನತೆ ಎರಡೂ ಪಕ್ಷದ ನಾಯಕರಿಗೆ ಸಮಾನ ಅವಕಾಶ ನೀಡಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಎಲ್ಲರೂ ಒಟ್ಟಾಗಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸೋಣ. ಚುನಾವಣಾ ಸಮಯದಲ್ಲಿ ರಾಜಕೀಯ ಮಾಡೋಣ’ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಂಜುನಾಥ ರೆಡ್ಡಿ, ಕೆ.ಪಿ.ನಾಗೇಶ್, ರಾಮಚಂದ್ರೇಗೌಡ, ಶ್ರೀನಾಥ್‌ ರೆಡ್ಡಿ, ಶ್ರೀನಿವಾಸ್‌ಮ, ಬಾರ್ ನಾರಾಯಣಸ್ವಾಮಿ, ಆಟೋ ಜಗದೀಶ್, ಗೊಲ್ಲಪಲ್ಲಿ ಪ್ರಸನ್ನ, ದುರ್ಗಾ ಪ್ರಸಾದ್, ಕುಮ್ಮಗುಂಟೆ ಮನು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.