ADVERTISEMENT

ಲಂಚ ಪ್ರಕರಣ: ಗ್ರಾಮ ಲೆಕ್ಕಿಗ– ಕರ ವಸೂಲಿಗಾರ ಬಂಧನ

ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:08 IST
Last Updated 8 ಫೆಬ್ರುವರಿ 2021, 17:08 IST
ವೆಂಕಟರಮಣಪ್ಪ
ವೆಂಕಟರಮಣಪ್ಪ   

ಕೋಲಾರ: ಜಿಲ್ಲೆಯ ಮುಳಬಾಗಿಲು ಮತ್ತು ಕೋಲಾರದಲ್ಲಿ ಸೋಮವಾರ ದಿಢೀರ್‌ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಲಂಚ ಪಡೆದ ಆರೋಪದ ಮೇಲೆ ಗ್ರಾಮ ಲೆಕ್ಕಿಗ ಹಾಗೂ ಕರ ವಸೂಲಿಗಾರರನ್ನು ಬಂಧಿಸಿದ್ದಾರೆ.

ಜಮೀನಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ಭೂಮಿ ತಂತ್ರಾಂಶದ ಮೂಲಕ ಹೆಸರು ಮತ್ತು ಅಳತೆ ವಿವರ ನಮೂದಿಸಲು ₹ 1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಮುಳಬಾಗಿಲು ತಾಲ್ಲೂಕು ಕಚೇರಿಯ ಗ್ರಾಮ ಲೆಕ್ಕಿಗ ಕಿರಣ್‌ ಅವರು ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಸಂತೋಷ್‌ ಎಂಬುವರು ತಮ್ಮ ಜಮೀನಿನ ಪಹಣಿಯಲ್ಲಿ ಹೆಸರು ಮತ್ತು ಅಳತೆ ದಾಖಲಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಕಿರಣ್‌ ಅವರು ಈ ಕಾರ್ಯಕ್ಕೆ ₹ 1 ಲಕ್ಷ ಲಂಚ ಕೊಡುವಂತೆ ಕೇಳಿದ್ದರು. ಈ ಸಂಬಂಧ ಸಂತೋಷ್‌ ಎಸಿಬಿಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಕಿರಣ್‌ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಬಂಧಿಸಿದ್ದಾರೆ.

ADVERTISEMENT

ಮತ್ತೊಂದು ಪ್ರಕರಣ: ಕೋಲಾರದ ಕುವೆಂಪುನಗರ ನಿವಾಸಿ ಆಸೀಫ್‌ ಪಾಷಾ ಎಂಬುವರು ತಮ್ಮ ನಿವೇಶನಗಳ ತೆರಿಗೆ ಪಾವತಿಯ ಮೊತ್ತಕ್ಕೆ ಚಲನ್‌ (ರಸೀದಿ) ಕೋರಿ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ನಗರಸಭೆ ಕರ ವಸೂಲಿಗಾರ ವೆಂಕಟರಮಣಪ್ಪ ಅವರು ತೆರಿಗೆ ಮೊತ್ತ ಕಡಿಮೆ ಮಾಡಿಕೊಡಲು ₹ 18 ಸಾವಿರ ಲಂಚ ಕೇಳಿದ್ದರು.

ಈ ಸಂಬಂಧ ಆಸೀಫ್‌ ಪಾಷಾ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ವೆಂಕಟರಮಣಪ್ಪ ಅವರನ್ನು ಸಂಜೆ ನಗರಸಭೆ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆಯಲ್ಲೇ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.