ADVERTISEMENT

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ಸಾರ್ವಜನಿಕರಿಂದ ತೀವ್ರ ಟೀಕೆ

ನಿರ್ಗಮಿತ ತಹಶೀಲ್ದಾರ್‌ ಶೋಭಿತಾ ಪೋಷಕರ ಷಷ್ಠಿಪೂರ್ತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 16:23 IST
Last Updated 6 ಆಗಸ್ಟ್ 2021, 16:23 IST
ಕೋಲಾರದಲ್ಲಿ ಶುಕ್ರವಾರ ನಡೆದ ನಿರ್ಗಮಿತ ತಹಶೀಲ್ದಾರ್‌ ಶೋಭಿತಾ ಅವರ ಪೋಷಕರ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಸ್ನೇಹಿತರು ಹಾಗೂ ಹಿತೈಷಿಗಳು ಶುಭ ಕೋರಿದರು
ಕೋಲಾರದಲ್ಲಿ ಶುಕ್ರವಾರ ನಡೆದ ನಿರ್ಗಮಿತ ತಹಶೀಲ್ದಾರ್‌ ಶೋಭಿತಾ ಅವರ ಪೋಷಕರ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಸ್ನೇಹಿತರು ಹಾಗೂ ಹಿತೈಷಿಗಳು ಶುಭ ಕೋರಿದರು   

ಕೋಲಾರ: ನಿರ್ಗಮಿತ ತಹಶೀಲ್ದಾರ್‌ ಶೋಭಿತಾ ಅವರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಶುಕ್ರವಾರ ತಮ್ಮ ಪೋಷಕರ ಷಷ್ಠಿಪೂರ್ತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿದ್ದು, ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಶೋಭಿತಾ ಅವರ ಸಂಬಂಧಿಕರು, ಸ್ನೇಹಿತರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು. ಕಲ್ಯಾಣ ಮಂಟಪದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಮಂದಿ ಅಂತರ ಕಾಯ್ದುಕೊಳ್ಳದೆ ಮತ್ತು ಮಾಸ್ಕ್‌ ಧರಿಸದೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದರು.

ಷಷ್ಠಿಪೂರ್ತಿ ಜತೆಗೆ ಕಲ್ಯಾಣ ಮಂಟಪದಲ್ಲಿ ಪೂಜೆ, ಆರತಕ್ಷತೆ ಸಹ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಬಂದಿದ್ದವರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹಿತೈಷಿಗಳು, ಸ್ನೇಹಿತರು ಹಾಗೂ ಸಂಬಂಧಿಕರು ಕೋವಿಡ್‌ ಆತಂಕ ಮರೆತು ಶೋಭಿತಾ ಅವರ ಪೋಷಕರಿಗೆ ಹಸ್ತಲಾಘವ ನೀಡಿ ಶುಭ ಕೋರಿದರು. ಕೆಲ ಪೊಲೀಸ್‌ ಸಿಬ್ಬಂದಿ ಜವಾಬ್ದಾರಿ ಮರೆತು ಇಲಾಖೆ ವಾಹನದಲ್ಲೇ ಸಮವಸ್ತ್ರಧಾರಿಗಳಾಗಿ ಕಾರ್ಯಕ್ರಮಕ್ಕೆ ಬಂದಿದ್ದರು.

ADVERTISEMENT

ತಾಲ್ಲೂಕಿನಲ್ಲಿ ಸುಮಾರು 2 ವರ್ಷ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದ ಶೋಭಿತಾ ಅವರು 10 ದಿನದ ಹಿಂದೆಯಷ್ಟೇ ವರ್ಗಾವಣೆಯಾಗಿದ್ದರು. ಜವಾಬ್ದಾರಿಯುತ ಹುದ್ದೆಯಲ್ಲಿರುವ ಶೋಭಿತಾ ಅವರು ಕೋವಿಡ್‌ ಆತಂಕದ ನಡುವೆಯೂ ಸರ್ಕಾರದ ಆದೇಶ ಧಿಕ್ಕರಿಸಿ ಪೋಷಕರ ಷಷ್ಠಿಪೂರ್ತಿ ಕಾರ್ಯಕ್ರಮ ನಡೆಸಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಾವಿರಾರು ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಕೋವಿಡ್‌ ಮಾರ್ಗಸೂಚಿ ಲೆಕ್ಕಿಸದೆ ಸಭೆ ನಡೆಸಿದ್ದರು. ಈ ಸಂಬಂಧ ವರ್ತೂರು ಪ್ರಕಾಶ್‌ ಸೇರಿದಂತೆ 105 ಮಂದಿ ವಿರುದ್ಧ ಕಂದಾಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.