ADVERTISEMENT

ಪರಿಶಿಷ್ಟರ ಮೇಲೆ ದೌರ್ಜನ್ಯ ಎಸಗಿದರೆ ಕ್ರಿಮಿನಲ್‌ ಪ್ರಕರಣ: ಸೆಲ್ವಮಣಿ

ಅನುದಾನ ಸದ್ಬಳಕೆಯಾಗಲಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 14:13 IST
Last Updated 27 ಜುಲೈ 2021, 14:13 IST
ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಕೋಲಾರದಲ್ಲಿ ಮಂಗಳವಾರ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದರು
ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಕೋಲಾರದಲ್ಲಿ ಮಂಗಳವಾರ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದರು   

ಕೋಲಾರ: ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ಸೌಲಭ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ಒದಗಿಸಬೇಕು. ಪರಿಶಿಷ್ಟರ ಮೇಲೆ ದೌರ್ಜನ್ಯ ಎಸಗಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಪರಿಶಿಷ್ಟ ಜನಾಂಗದವರ ಅಭಿವೃದ್ಧಿಗೆ ಸದ್ಬಳಕೆಯಾಗಬೇಕು’ ಎಂದು ಸೂಚಿಸಿದರು.

‘ಇಲಾಖೆಗಳಿಂದ ಬಿಡುಗಡೆಯಾದ ಸಾಲದ ಹಣ ನೀಡುವಲ್ಲಿ ಬ್ಯಾಂಕ್‌ಗಳು ವಿಳಂಬ ಮಾಡುತ್ತಿವೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಪ್ರತಿ ಹಳ್ಳಿಯಲ್ಲಿ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಬಾಬು ಜಗಜೀವನ್‌ರಾಂ ಭವನ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ಜಮೀನು ಮಂಜೂರು ಮಾಡುತ್ತೇವೆ. ಹಳ್ಳಿಗಳಲ್ಲಿ ಸ್ಮಶಾನಗಳ ಒತ್ತುವರಿ ತೆರವುಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

‘ಟ್ರ್ಯಾಕ್ಟರ್‌, ಟ್ರ್ಯಾಲಿ ಖರೀದಿಗೆ ಹಾಗೂ ಹನಿ ನೀರಾವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಕೃಷಿ ಇಲಾಖೆಯಿಂದ ಸಹಾಯಧನ ನೀಡಬೇಕು. ಆದರೆ, ಇತರೆ ಜನಾಂಗದವರು ಪರಿಶಿಷ್ಟರ ಜಾತಿ ಪ್ರಮಾಣಪತ್ರ ಮತ್ತು ಜಮೀನು ದಾಖಲೆಪತ್ರ ಪಡೆದು ಅಕ್ರಮವಾಗಿ ಕೃಷಿ ಇಲಾಖೆಯ ಸಹಾಯಧನ ಪಡೆಯುತ್ತಿದ್ದಾರೆ’ ಎಂದು ಸಮಿತಿ ಸದಸ್ಯ ಮುನಿಯಪ್ಪ ಆರೋಪಿಸಿದರು.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಜಮೀನು ನೀಡಬೇಕು. ಆದರೆ, ಹೊರ ಜಿಲ್ಲೆಗಳ ಜನರು ಜಿಲ್ಲೆಗೆ ಬಂದು ಕೆಐಎಡಿಬಿಯಿಂದ ಜಮೀನು ಪಡೆದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸ್ಥಳೀಯರಿಗೆ ಜಮೀನು ಕೊಡಬೇಕು’ ಎಂದು ಒತ್ತಾಯಿಸಿದರು.

ವಿದ್ಯುತ್‌ ಸಂಪರ್ಕ: ‘ಅಂಬೇಡ್ಕರ್‌ ಅಭಿವೃದ್ಧಿ ನಿಮಗದಿಂದ ಕೊರೆಸಿರುವ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಒದಗಿಸಬೇಕು. ಲಿಡ್‍ಕರ್ ಸಂಸ್ಥೆಯಿಂದ ಅನರ್ಹರಿಗೆ ಪೆಟ್ಟಿಗೆ ಮಾದರಿಯ ಚಿಕ್ಕ ಅಂಗಡಿ ನೀಡಲಾಗಿದೆ. ಆದರೆ, ನಿಜವಾಗಿ ಚಪ್ಪಲಿ ಹೊಲೆಯುವವರು ರಸ್ತೆ ಬದಿಯಲ್ಲಿ ಛತ್ರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ’ ಎಂದು ಮುನಿಯಪ್ಪ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಜಿಲ್ಲಾ ಕೇಂದ್ರದಲ್ಲಿ ಬಳಕೆಯಾಗದೆ ಇರುವ ಅಂಗಡಿಗಳನ್ನು ಪರಿಶೀಲನೆ ಮಾಡಿ ಬಳಕೆ ಮಾಡುವವರಿಗೆ ನೀಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ ಮದ್ಯ ಮಾರಾಟ: ‘ಅಂಬೇಡ್ಕರ್ ಅಭಿವೃದ್ಧಿ ನಿಮಗದಿಂದ ಗಂಗಾ ಕಲ್ಯಾಣ ಯೋಜನೆಯಡಿ 1 ಸಾವಿರ ಅಡಿ ಕೊಳವೆ ಬಾವೊ ಕೊರೆಸಿ 7.5 ಎಚ್.ಪಿ ಮೋಟರ್ ನೀಡಿದರೆ ನೀರು ಬರುವುದಿಲ್ಲ. ಆದ ಕಾರಣ 20 ಎಚ್.ಪಿ ಮೋಟರ್ ಅಳವಡಿಸಬೇಕು’ ಎಂದು ಸಮಿತಿ ಸದಸ್ಯ ಅಂಬರೀಶ್ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

‘ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ಕೊಟ್ಟು ಅಕ್ರಮವಾಗಿ ಮದ್ಯ ಮಾರುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಪೊಲೀಸ್ ಇಲಾಖೆಯಿಂದ ಪ್ರತಿ ತಿಂಗಳು ಕೊನೆಯ ಭಾನುವಾರ ಅಥವಾ ಶನಿವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ನಡೆಸಬೇಕು’ ಎಂದು ಕೋರಿದರು.

‘ಪರಿಶಿಷ್ಟರು ದೌರ್ಜನ್ಯ ಪ್ರಕರಣ ದಾಖಲಿಸಿದಾಗ ಆರೋಪಿಗಳು ಪ್ರತಿದೂರು ದಾಖಲಿಸುತ್ತಿದ್ದಾರೆ. ದೌರ್ಜನ್ಯ ಪ್ರಕರಣ ದಾಖಲಿಸುವ ಬಗ್ಗೆ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಬಿಡುಗಡೆಯಾಗುವ ಅನುದಾನವನ್ನು ಸದ್ಬಳಕೆ ಮಾಡಬೇಕು’ ಎಂದು ಸಮಿತಿ ಸದಸ್ಯ ವೆಂಕಟರಾಮು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು, ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌, ಉಪ ವಿಭಾಗಾಧಿಕಾರಿ ಆನಂದ್‌ಪ್ರಕಾಶ್ ಮೀನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.