ADVERTISEMENT

ವಿವೇಕಾನಂದರ ಪ್ರೇರಣಾದಾಯಕ ನುಡಿ ದಾರಿದೀಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 15:15 IST
Last Updated 13 ಜನವರಿ 2022, 15:15 IST
ಕೋಲಾರ ತಾಲ್ಲೂಕಿನ ಭಟ್ರಹಳ್ಳಿಯಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಯುವ ಸಪ್ತಾಹದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಟಿ.ನಾಗರಾಜ್ ಮಾತನಾಡಿದರು
ಕೋಲಾರ ತಾಲ್ಲೂಕಿನ ಭಟ್ರಹಳ್ಳಿಯಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಯುವ ಸಪ್ತಾಹದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಟಿ.ನಾಗರಾಜ್ ಮಾತನಾಡಿದರು   

ಕೋಲಾರ: ‘ಸ್ವಾಮಿ ವಿವೇಕಾನಂದರ ಚಿಂತನೆಯು ಇಂದಿಗೂ ಪ್ರಸ್ತುತ. ಅವರ ಪ್ರೇರಣಾದಾಯಕ ನುಡಿಯು ಯುವಕರಿಗೆ ದಾರಿದೀಪ’ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಟಿ.ನಾಗರಾಜ್ ಅಭಿಪ್ರಾಯಪಟ್ಟರು.

ಜಿಲ್ಲಾ ನೆಹರೂ ಯುವ ಕೇಂದ್ರ, ವನಸಿರಿ ಸಾಂಸ್ಕೃತಿಕ ಕಲಾ ಸಂಘದ ಸಹಯೋಗದಲ್ಲಿ ತಾಲ್ಲೂಕಿನ ಭಟ್ರಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಯುವ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

‘ದೇಶದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಅವರ ಸ್ವದೇಶಿ ಚಿಂತನೆ, ಸಂಕಲ್ಪ, ವ್ಯಕ್ತಿತ್ವ ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಯುವಕ ಯುವತಿಯರು ಸ್ವಾಮಿ ವಿವೇಕಾನಂದರ ತತ್ವಾದರ್ಶ ಪಾಲಿಸುವುದರ ಜತೆಗೆ ಗುರು ಹಿರಿಯರನ್ನು ಗೌರವಿಸುವುದು ರೂಢಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿವೇಕಾನಂದರು 5 ವರ್ಷ ದೇಶದೆಲ್ಲೆಡೆ ಸಂಚರಿಸಿ ತತ್ವಜ್ಞಾನ, ಯೋಗ, ವೇದಾಂತದ ಬಗ್ಗೆ ಪ್ರಚಾರ ನಡೆಸಿದರು. ಅಲ್ಲದೇ, ವಿದೇಶದಲ್ಲೂ ದೇಸಿ ಸಂಸ್ಕೃತಿ ಪಸರಿಸಿದರು. ಅವರು 1893ರಲ್ಲಿ ಷಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ತತ್ವಾದರ್ಶವನ್ನು ಹೃದಯ ಸ್ಪರ್ಶಿಯಾಗಿ ತಿಳಿಸಿದ್ದರು. ಅವರ ಭಾಷಣದ ಸಂದೇಶ ಮತ್ತು ಆಲೋಚನೆಗಳು ಪ್ರತಿಯೊಬ್ಬರಿಗೂ ತಿಳಿಯಬೇಕು’ ಎಂದರು.

‘ಯುವಕರು ದುಶ್ಚಟಕ್ಕೆ ಬಲಿಯಾಗದೆ ಆದರ್ಶ ವ್ಯಕ್ತಿತ್ವ ಮೈಗೂಡಿಸಿಕೊಂಡರೆ ವಿಶ್ವಮಾನ್ಯ ರಾಷ್ಟ ನಿರ್ಮಾಣ ಮಾಡಬಹುದೆಂದು ವಿವೇಕಾನಂದರು ತಿಳಿಸಿಕೊಟ್ಟಿದ್ದಾರೆ. ಅವರ ಜಯಂತಿ ಆಚರಣೆಗೆ ಸೀಮಿತಗೊಳ್ಳಬಾರದು. ವಿದ್ಯಾರ್ಥಿಗಳು ಅವರ ಹಾದಿಯಲ್ಲಿ ಸಾಗಿದರೆ ಜೀವನದ ಗುರಿ ಸಾಧಿಸಬಹುದು’ ಎಂದು ವನಸಿರಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಎಚ್.ಎನ್.ಮೂರ್ತಿ ಸಲಹೆ ನೀಡಿದರು.

ಜನಪದ ಕಲಾವಿದ ಕೃಷ್ಣ, ದಿಂಬಚಾಮನಹಳ್ಳಿ ಗ್ರಾಮಸ್ಥರದ ಅಂಬರೀಶ್, ಮಧುಸೂದನ್, ವಿ.ವೆಂಕಟರಮಣಪ್ಪ, ಶ್ರೀನಿವಾಸಗೌಡ, ಗಣೇಶಯ್ಯ, ವಿ.ಸುಬ್ರಮಣಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.