ADVERTISEMENT

ಕಾಲ್ನಡಿಗೆ ಜಾಥಾಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:09 IST
Last Updated 11 ಜನವರಿ 2021, 2:09 IST
ಕೋಲಾರದಲ್ಲಿ ಭಾನುವಾರ ಯುವಮೋರ್ಚಾ ಸದಸ್ಯರು ಏರ್ಪಡಿಸಿದ್ದ ಕಾಲ್ನಡಿಗೆ ಜಾಥದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಭಾನುವಾರ ಯುವಮೋರ್ಚಾ ಸದಸ್ಯರು ಏರ್ಪಡಿಸಿದ್ದ ಕಾಲ್ನಡಿಗೆ ಜಾಥದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಪಾಲ್ಗೊಂಡಿದ್ದರು   

ಕೋಲಾರ: ‘ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಯುವಕರು ಉತ್ತಮ ಪ್ರಜೆಗಳಾಗಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ವಿವೇಕಾನಂದರ ಜನ್ಮದಿನದ ಅಂಗವಾಗಿ ಜೂನಿಯರ್‌ ಕಾಲೇಜಿನ ಆವರಣದಲ್ಲಿ ಜಿಲ್ಲಾ ಯುವ ಮೋರ್ಚಾ ಏರ್ಪ‍ಡಿಸಿದ್ದ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿವೇಕಾನಂದರ ಜನ್ಮದಿನದ ಅಂಗವಾಗಿ ಇಡೀ ದೇಶದಾದ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಯುವಕರು ಮಾದರಿ ಜೀವನ ನಡೆಸಬೇಕು. ಸಂಸ್ಕೃತಿ, ನಾಡು ನುಡಿ, ಧರ್ಮಕ್ಕಾಗಿ ದುಡಿಯಬೇಕು. ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ADVERTISEMENT

ಅಮೆರಿಕಾದ ಚಿಕಾಗೋದಲ್ಲಿನ ಸರ್ವಧರ್ಮ ಸಮ್ಮೇಳನಕ್ಕೆ ಸ್ವಾಮಿ ವಿವೇಕಾನಂದರು ಹೋಗಿದ್ದ ಸಂದರ್ಭದಲ್ಲಿ ಭಾಷಣ ಮಾಡುವಾಗ ಎಲ್ಲ ಸಹೋದರ, ಸಹೋದರಿಯರೇ ಎಂದು ಕರೆದಾಗ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಲ್ಲಿ ಆನಂದಭಾಷ್ಪ ಬಂದಿತ್ತು.
ಅಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿಕೊಂಡು, ಅವರ ಹಾದಿಯಲ್ಲಿ ಸಾಗಬೇಕು. ಯುವಕರ ದಿನಾಚರಣೆ ಅಂಗವಾಗಿ ಉತ್ತಮನಾಗು, ಉಪಕಾರಿಯಾಗು ಎನ್ನುವ ಘೋಷಣೆಯೊಂದಿಗೆ ಜಾಥಾದಲ್ಲಿ ಯುವಕರು ಪಾಲ್ಗೊಂಡಿದ್ದು, ಅವರ ಮನಸ್ಸಿನಲ್ಲಿ ನಿರಂತರವಾಗಿ ಅದು ಅಡಗಿರಬೇಕು. ಅಂತಹ ಘೋಷಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಪ್ರಜೆಗಳಾಗಲು ಸಾದ್ಯ ಎಂದು ಅಭಿಪ್ರಾಯಪಟ್ಟರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಕೋರ್ ಕಮಿಟಿ ಸದಸ್ಯ ವಿಜಯ್‍ಕುಮಾರ್, ಮುಖಂಡ ಮಾಗೇರಿ ನಾರಾಯಣಸ್ವಾಮಿ, ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಾಲಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.