ADVERTISEMENT

ಕೋಲಾರ: ಮತೀಯ ಶಕ್ತಿಗಳ ವಿರುದ್ಧ ಧ್ವನಿ ಎತ್ತಿ-ಎಂ.ಎಲ್‌.ಅನಿಲ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 13:47 IST
Last Updated 28 ಏಪ್ರಿಲ್ 2022, 13:47 IST
ರಂಜಾನ್‌ ಹಿನ್ನೆಲೆಯಲ್ಲಿ ಕೋಲಾರದ ಗೌರಿಪೇಟೆಯ ಲತಿಫಾ ಭಾನು ಮಸೀದಿಯಲ್ಲಿ ಬುಧವಾರ ರಾತ್ರಿ ನಡೆದ ಇಫ್ತಾರ್ ಕೂಟದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಹಾಗೂ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡರು
ರಂಜಾನ್‌ ಹಿನ್ನೆಲೆಯಲ್ಲಿ ಕೋಲಾರದ ಗೌರಿಪೇಟೆಯ ಲತಿಫಾ ಭಾನು ಮಸೀದಿಯಲ್ಲಿ ಬುಧವಾರ ರಾತ್ರಿ ನಡೆದ ಇಫ್ತಾರ್ ಕೂಟದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಹಾಗೂ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡರು   

ಕೋಲಾರ: ‘ದೇಶದಲ್ಲಿ ಜನರು ಶಾಂತಿ ಸಹಬಾಳ್ವೆಯಿಂದ ಬದುಕುತ್ತಿದ್ದು, ಸಮಾಜವನ್ನು ಹೊಡೆಯುವ ಕೋಮು ಶಕ್ತಿಗಳಿಗೆ ಹೋರಾಟದ ಮೂಲಕ ತಕ್ಕ ಉತ್ತರ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್ ಹೇಳಿದರು.

ರಂಜಾನ್‌ ಹಿನ್ನೆಲೆಯಲ್ಲಿ ನಗರದ ಗೌರಿಪೇಟೆಯ ಲತಿಫಾ ಭಾನು ಮಸೀದಿಯಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಮಾತನಾಡಿ, ‘ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನವು ತತ್ವ ಸಿದ್ಧಾಂತಗಳೊಂದಿಗೆ ಹಬ್ಬಗಳ ಆಚರಣೆಗೆ ಅವಕಾಶ ನೀಡಿದ್ದು, ಹಿಂದೂ ಮುಸ್ಲಿಮರು ಭೇದ ಭಾವವಿಲ್ಲದೆ ಸಹೋದರರಂತೆ ಬದುಕುತ್ತಿದ್ದಾರೆ’ ಎಂದರು.

‘ಜಾತಿ. ಧರ್ಮದ ಆಧಾರದಲ್ಲಿ ಹಿಂದೂ ಮತ್ತು ಮುಸ್ಲಿಮರನ್ನು ಪ್ರತ್ಯೇಕಿಸಲು ಎಂದಿಗೂ ಅವಕಾಶ ನೀಡಬಾರದು. ದೇಶದಲ್ಲಿ ಗುಡಿ, ಚರ್ಚ್, ಮಸೀದಿಗಳು ಪವಿತ್ರ ಸ್ಥಳಗಳಾಗಿವೆ. ಆದರೆ, ಕೆಲವರು ಸ್ವಾರ್ಥ ಹಿತಾಸಕ್ತಿಗಾಗಿ ಈ ಪವಿತ್ರ ಸ್ಥಳಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಮತೀಯ ಶಕ್ತಿಗಳ ವಿರುದ್ಧ ಧ್ವನಿ ಎತ್ತಬೇಕು. ಹಬ್ಬಗಳು ಬಂದಾಗ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸಹೋದರರಂತೆ ಆಚರಿಸೋಣ. ನಾವೆಲ್ಲಾ ಒಂದೇ ಎಂಬ ಭಾವನೆ ಜನರಲ್ಲಿ ಮೂಡಬೇಕು’ ಎಂದು ಆಶಿಸಿದರು.

ADVERTISEMENT

‘ಹಿಂದೂ ಕೋಮುವಾದ ಮತ್ತು ಮುಸ್ಲಿಂ ಕೋಮುವಾದ ಎರಡೂ ಸಹ ದೇಶಕ್ಕೆ ಅಪಾಯಕಾರಿ. ಕೋಮುವಾದ ಕೊನೆಗಾಣಿಸಲು ಎಲ್ಲಾ ಧರ್ಮದವರು ಒಗ್ಗೂಡಬೇಕು. ದೇಶವನ್ನು ಉಳಿಸುವ ಇಂತಹ ಕಾರ್ಯಕ್ರಮಗಳನ್ನು ರಂಜಾನ್ ಹಬ್ಬಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿ ಹಂತದಲ್ಲಿ ಶಾಂತಿ ಸಭೆ ಮೂಲಕ ಜನರನ್ನು ಎಚ್ಚರಿಸಬೇಕು’ ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಸಲಹೆ ನೀಡಿದರು.

ಜೆಡಿಎಸ್‌ ಮುಖಂಡ ಸಿಎಂಆರ್ ಶ್ರೀನಾಥ್, ಪತ್ರಕರ್ತರಾದ ಸಿ.ಎಂ.ಮುನಿಯಪ್ಪ, ಕೆ.ಎಸ್ ಗಣೇಶ್, ಚಿನ್ಮಯ ಆನಂದ ಸ್ವಾಮೀಜಿ, ಪ್ರಕ್ರಿಯೆ ಸಂಸ್ಥೆಯ ಮನೋಹರ್, ಸಿಪಿಎಂ ಮುಖಂಡೆ ವಿ.ಗೀತಾ, ನಗರಸಭೆ ಸದಸ್ಯ ಅಂಬರೀಶ್‌. ವಿವಿಧ ಸಮುದಾಯಗಳ ಮುಖಂಡರಾದ ಅಫ್ರೋಜ್‌ ಪಾಷಾ, ಪಂಡಿತ್ ಮುನಿವೆಂಕಟಪ್ಪ, ವಿಜಿಕೃಷ್ಣ, ಭೀಮರಾಜ್‌, ರಾಜಪ್ಪ, ಶ್ರೀಕೃಷ್ಣ, ಟಿ.ಎಂ.ವೆಂಕಟೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.