ADVERTISEMENT

ಜಲ ಸಂರಕ್ಷಣೆ: ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ

₹ 25 ಲಕ್ಷ ಬಹುಮಾನ, ಕೇಂದ್ರ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ಜಿ.ಪಂ ಸಿಇಒ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 7:35 IST
Last Updated 19 ನವೆಂಬರ್ 2025, 7:35 IST
ನವದೆಹಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ‘ರಾಷ್ಟ್ರೀಯ ಜಲ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ, ಕೋಲಾರ ಜಿ.ಪಂ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಜಲ ಶಕ್ತಿ ಮಂತ್ರಾಲಯದ ರಾಜ್ಯ ಸಚಿವ ವಿ.ಸೊಮಣ್ಣ ಪಾಲ್ಗೊಂಡಿದ್ದರು
ನವದೆಹಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ‘ರಾಷ್ಟ್ರೀಯ ಜಲ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ, ಕೋಲಾರ ಜಿ.ಪಂ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಜಲ ಶಕ್ತಿ ಮಂತ್ರಾಲಯದ ರಾಜ್ಯ ಸಚಿವ ವಿ.ಸೊಮಣ್ಣ ಪಾಲ್ಗೊಂಡಿದ್ದರು   

ಕೋಲಾರ: ಜಿಲ್ಲೆಗೆ ಜಲ ಸಂಚಯ ಜನ ಭಾಗಿದಾರಿ (ಜೆಎಸ್‌ಜೆಬಿ) ಅಭಿಯಾನದಡಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ₹ 25 ಲಕ್ಷ ಬಹುಮಾನ ದೊರಕಿದೆ. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ‘ರಾಷ್ಟ್ರೀಯ ಜಲ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಜಲ ಶಕ್ತಿ ಮಂತ್ರಾಲಯದ ರಾಜ್ಯ ಸಚಿವ ವಿ. ಸೊಮಣ್ಣ ಪಾಲ್ಗೊಂಡಿದ್ದರು.

ಜಲ ಸಂರಕ್ಷಣೆ ಮತ್ತು ಪ್ರಕೃತಿ ಸಂರಕ್ಷಣಾ ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಿದ್ದರಿಂದ ಈ ಗೌರವ ಒಲಿದಿದೆ. ನೂರಾರು ಕೆರೆಗಳ ಪುನಶ್ಚೇತನ, ರಾಜಕಾಲುವೆಗಳ ಅಭಿವೃದ್ಧಿ ಮಾಡಲಾಗಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಕೃಷಿಗೆ ನೀರು ಲಭಿಸಿದೆ. ಜಿಲ್ಲೆಯು ಬೆಂಗಳೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ.

ADVERTISEMENT

ಮುಳಬಾಗಿಲು ತಾಲ್ಲೂಕಿನ ನಂಗಲಿ, ಆಲಂಗೂರು, ಅಂಗೋಂಡಹಳ್ಳಿ, ದೇವರಾಯಸಮುದ್ರ, ಮುಡಿಯನೂರು, ಕುರುಡುಮಲೆ, ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ, ಮಾಲೂರು ತಾಲ್ಲೂಕಿನ ಶಿವಾರಪಟ್ಟಣ, ಕೋಲಾರ ತಾಲ್ಲೂಕಿನ ವಕ್ಕಲೇರಿ ಹಾಗೂ ಬಂಗಾರಪೇಟೆ ತಾಲ್ಲೂಕಿನ ಮಾವಹಳ್ಳಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ನರೇಗಾ, ಜಲ ಜೀವನ್‌ ಮಿಷನ್‌, ಅಟಲ್‌ ಭೂಜಲ್‌ ಸೇರಿದಂತೆ ಅರಣ್ಯ, ಕೃಷಿ, ತೋಟಗಾರಿಕೆ ಇಲಾಖೆ ಕಾಮಗಾರಿಗಳನ್ನು ಪರಿಶೀಲಿಸಲಾಗಿತ್ತು.

ಅಭಿಯಾನದಡಿ ರಾಜ್ಯಗಳನ್ನು 5 ವಲಯಗಳಾಗಿ ವಿಂಗಡಿಸಲಾಗಿತ್ತು. 3ನೇ ವಲಯದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿದ್ದವು. ಈ ಪೈಕಿ ಕರ್ನಾಟಕದ 7 ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ಇದರಲ್ಲಿ ಬೆಂಗಳೂರು ವಿಭಾಗದಲ್ಲಿ ಕೋಲಾರ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ.

ಮನರೇಗಾ ಹಾಗೂ ಇತರೆ ಯೋಜನೆಗಳಡಿ ಜಿಲ್ಲೆಯು 2024 ಏಪ್ರಿಲ್‌ 1ರಿಂದ 2025ರ ಮಾರ್ಚ್ 31ರವರೆಗೆ ಅಂದಾಜು 8,470 ಜಲಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಜಲಸಂಚಯ ಪೋರ್ಟಲ್‌ನಲ್ಲಿ ದಾಖಲಿಸಲಾಗಿತ್ತು.

ಇವುಗಳಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಾದ ಬದು ನಿರ್ಮಾಣ, ಕೊಳವೆಬಾವಿ ಮರುಪೂರಣ ಪಿಟ್‌, ಸೋಕ್‌ಪಿಟ್‌, ಸಮಗ್ರ ಕೆರೆ ಅಭಿವೃದ್ಧಿ, ಕಟ್ಟೆಗಳ ಅಭಿವೃದ್ಧಿ, ಕಲ್ಯಾಣಿಗಳ ಜೀರ್ಣೋದ್ಧಾರ, ಮಳೆ ನೀರು ಸಂರಕ್ಷಣೆ, ತೆರೆದ ಬಾವಿ, ನಾಲಾ ಹೊಳೆತ್ತುವುದು, ಚೆಕ್‌ ಡ್ಯಾಮ್‌ ಕಾಮಗಾರಿ ಅನುಷ್ಠಾನಗೊಳಿಸಲಾಗಿತ್ತು. ಕೇಂದ್ರ ನೋಡಲ್‌ ಅಧಿಕಾರಿಗಳ ತಂಡ ಜಿಲ್ಲೆಗೆ ಆಗಮಿಸಿ ಕಾಮಗಾರಿಗಳನ್ನು ಪರಿಶೀಲಿಸಿ ವರದಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.