ADVERTISEMENT

ನೀರು ಅಮೂಲ್ಯ ಸಂಪತ್ತು: ಸಂರಕ್ಷಣೆ ಆದ್ಯ ಕರ್ತವ್ಯ

ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 13:13 IST
Last Updated 22 ಮಾರ್ಚ್ 2022, 13:13 IST
ವಿಶ್ವ ಜಲ ದಿನಾಚರಣೆ ಅಂಗವಾಗಿ ಕೋಲಾರದ ಕೋಲಾರಮ್ಮ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಪಾಲ್ಗೊಂಡರು
ವಿಶ್ವ ಜಲ ದಿನಾಚರಣೆ ಅಂಗವಾಗಿ ಕೋಲಾರದ ಕೋಲಾರಮ್ಮ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಪಾಲ್ಗೊಂಡರು   

ಕೋಲಾರ: ‘ಸುತ್ತಮುತ್ತಲಿನ ಕೆರೆಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗಾಗಿ ಕೊಡುಗೆಯಾಗಿ ನೀಡಬೇಕು. ಕೆರೆಗಳ ರಕ್ಷಣೆ ಎಲ್ಲರ ಜವಾಬ್ದಾರಿ’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕಿವಿಮಾತು ಹೇಳಿದರು.

ವಿಶ್ವ ಜಲ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್‌ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಕೋಲಾರಮ್ಮ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

‘ಭೂಮಿ ಮೇಲೆ ವಾಸಿಸುವ ಮಾನವ ಸಮುದಾಯ ಸೇರಿದಂತೆ ಪ್ರಾಣಿ, ಪಕ್ಷಿ ಸಂಕುಲಕ್ಕೆ ಬದುಕಲು ಅತ್ಯಗತ್ಯವಾದ ನೀರನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನೀರಿನ ಮಿತ ಬಳಕೆ ಮತ್ತು ಅದರ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಮನೆ ಹಾಗೂ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಜನರು ಕಣ್ಣ ಮುಂದೆ ಕಾಣಿಸುವ ಕೆರೆಗಳಿಗೆ ತ್ಯಾಜ್ಯ ಸುರಿದು ಕೆರೆಗಳನ್ನು ನಾಶಪಡಿಸುತ್ತಿದ್ದಾರೆ. ಮನುಷ್ಯನಿಗೆ ಬದುಕಲು ನೀರು ಎಷ್ಟು ಮುಖ್ಯವೋ ಅದೇ ರೀತಿ ನೀರನ್ನು ರಕ್ಷಣೆ ಮಾಡುವುದು ಆದ್ಯತೆ ಆಗಬೇಕು. ಸಾಕಷ್ಟು ಸಂದರ್ಭದಲ್ಲಿ ಮನೆ, ಕಚೇರಿಗಳಲ್ಲಿ ನೀರನ್ನು ವ್ಯರ್ಥ ಮಾಡುತ್ತೇವೆ. ಆದರೆ, ಗ್ರಾಮೀಣ ಭಾಗದಲ್ಲಿ ನೀರಿಗೆ ಹಾಹಾಕಾರವಿದೆ. ಮುಗಿದು ಹೋಗುವ ಅಮೂಲ್ಯ ಸಂಪತ್ತಾದ ನೀರನ್ನು ಪೋಲು ಮಾಡುವ ಜನ ಗ್ರಾಮೀಣ ಭಾಗದ ಜನರ ಬವಣೆ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಕೋಲಾರ ಜಿಲ್ಲೆ ಈ ಹಿಂದೆ ನೀರಿಲ್ಲದೆ ಬರ ಪರಿಸ್ಥಿತಿ ಎದುರಿಸಿದೆ. ಭವಿಷ್ಯದಲ್ಲಿ ಮತ್ತೆ ಅಂತಹ ಪರಿಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ನೀರಿನ ಮೂಲಗಳಾದ ಕೆರೆಗಳನ್ನು ಸಂರಕ್ಷಣೆ ಮಾಡಬೇಕು. ಕೆರೆ ಕುಂಟೆಗಳ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಊಟಕ್ಕಿಂತ ಮುಖ್ಯ: ‘ಮನುಷ್ಯನಿಗೆ ಊಟಕ್ಕಿಂತ ನೀರು ಬಹಳ ಮುಖ್ಯ. ವಿಶ್ವ ಸಂಸ್ಥೆಯ ನಿರ್ದೇಶನದಂತೆ ವಿಶ್ವ ಜಲ ದಿನ ಆಚರಿಸಲಾಗುತ್ತಿದೆ. ನೀರು ಬಂಗಾರವಿದ್ದಂತೆ. ಅದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಮನುಕುಲ ಭವಿಷ್ಯದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಪಿ.ದೇವಮಾನೆ ಹೇಳಿದರು.

‘ಕೋಲಾರದಂತಹ ಬರಪೀಡಿತ ಜಿಲ್ಲೆಯಲ್ಲಿ ಜನರು ಹನಿ ನೀರನ್ನು ಜೋಪಾನವಾಗಿ ಕಾಪಾಡಿ ಬಳಸಬೇಕು. ಜಲ ಮೂಲಗಳನ್ನು ರಕ್ಷಿಸಿ ಅಂತರ್ಜಲ ಮಟ್ಟ ಹೆಚ್ಚಿಸುವತ್ತ ಗಮನ ಹರಿಸಬೇಕು. ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಿ ಕೆರೆಗಳು ಭರ್ತಿಯಾದರೆ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ನೀರಿಗೆ ತುಂಬಾ ತೊಂದರೆಯಿದೆ. ಹೀಗಾಗಿ ಜನರು ಮಳೆಗಾಲದಲ್ಲಿ ತೋಟ ಮತ್ತು ಮನೆಗಳಲ್ಲಿ ಮಳೆ ನೀರು ಶೇಖರಣೆ ಮಾಡಿಕೊಳ್ಳಬೇಕು. ಅವಶ್ಯಕತೆ ಇದ್ದಷ್ಟು ಮಾತ್ರ ನೀರು ಬಳಸುವ ಕ್ರಮಗಳನ್ನು ಅನುಸರಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಹೇಳಿದರು.

‘ಕೋಲಾರಮ್ಮ ಕೆರೆಗೆ ನಗರದ ಒಳಚರಂಡಿ ಕೊಳಚೆ ನೀರು ಹರಿ ಬಿಡಲಾಗುತ್ತಿದೆ. ಇದರಿಂದ ಕೆರೆಯ ಮೂಲಸ್ವರೂಪವೇ ಬದಲಾಗಿದೆ. ಕೆರೆಗೆ ಕೊಳಚೆ ನೀರು ಹರಿಸುವುದನ್ನು ಅಧಿಕಾರಿಗಳು ತಡೆಯಬೇಕು’ ಎಂದು ಜಿ‌ಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ಮನವಿ ಮಾಡಿದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಕೃಷ್ಣ, ವಕೀಲ ಧನರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.