ADVERTISEMENT

ನೀರು ಕಳವು: ಕ್ರಿಮಿನಲ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 15:58 IST
Last Updated 3 ಏಪ್ರಿಲ್ 2020, 15:58 IST
ಕೋಲಾರ ತಾಲ್ಲೂಕಿನ ಸೀತಿಹೊಸೂರು ಸಮೀಪ ಕೆ.ಸಿ ವ್ಯಾಲಿ ಕಾಲುವೆಯಿಂದ ಕೃಷಿ ಚಟುವಟಿಕೆಗೆ ನೀರು ಕಳವು ಮಾಡುತ್ತಿರುವ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಶೋಭಿತಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಕೋಲಾರ ತಾಲ್ಲೂಕಿನ ಸೀತಿಹೊಸೂರು ಸಮೀಪ ಕೆ.ಸಿ ವ್ಯಾಲಿ ಕಾಲುವೆಯಿಂದ ಕೃಷಿ ಚಟುವಟಿಕೆಗೆ ನೀರು ಕಳವು ಮಾಡುತ್ತಿರುವ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಶೋಭಿತಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.   

ಕೋಲಾರ: ‘ತಾಲ್ಲೂಕಿನ ವಿವಿಧೆಡೆ ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಕಾಲುವೆ ಮತ್ತು ಕೆರೆಗಳಿಗೆ ಅಕ್ರಮವಾಗಿ ಪೈಪ್‌ಲೈನ್‌ ಅಳವಡಿಸಿ ನೀರು ಕಳವು ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ತಹಶೀಲ್ದಾರ್‌ ಶೋಭಿತಾ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಸೀತಿಹೊಸೂರು ಗ್ರಾಮದ ಸಮೀಪ ಕೆ.ಸಿ ವ್ಯಾಲಿ ಕಾಲುವೆಯಿಂದ ಕೆಲವರು ಕೃಷಿ ಚಟುವಟಿಕೆಗೆ ನಿಯಮಬಾಹಿರವಾಗಿ ನೀರು ಹರಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಕೆಲ ವ್ಯಕ್ತಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೆ.ಸಿ ವ್ಯಾಲಿ ಕಾಲುವೆಯಿಂದ ಸುಮಾರು 8 ಕಿಲೋ ಮೀಟರ್ ದೂರದ ತಿಪ್ಪೇನಹಳ್ಳಿವರೆಗೂ ಪೈಪ್‌ಲೈನ್‌ ಹಾಕಿ ನೀರು ಹರಿಸಿಕೊಳ್ಳುತ್ತಿರುವುದು ತಹಶೀಲ್ದಾರ್‌ ಪರಿಶೀಲನೆ ವೇಳೆ ಪತ್ತೆಯಾಯಿತು. ಅಲ್ಲದೇ, ಕಾಲುವೆ ಅಕ್ಕಪಕ್ಕದ ಜಮೀನುಗಳ ರೈತರಿಗೆ ಹಣದ ಆಮಿಷವೊಡ್ಡಿ ಅವರ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆದು ದೂರದ ಗ್ರಾಮಗಳಿಗೆ ನೀರು ಪೂರೈಕೆ ಮಾಡುತ್ತಿರುವ ಸಂಗತಿ ಬಯಲಾಯಿತು.

ADVERTISEMENT

ಕೆ.ಸಿ ವ್ಯಾಲಿ ಯೋಜನೆಯ ನೀರು ಕಳವಿನ ವಿಚಾರವಾಗಿ ಸೀತಿಹೊಸೂರು ಗ್ರಾಮದ ಮುರಳಿಗೌಡ ಮತ್ತು ಗ್ರಾಮಸ್ಥರ ಮೇಲೆ ತಿಪ್ಪೇನಹಳ್ಳಿಯ ದೇವರಾಜ್ ಹಾಗೂ ನಾಗೇಶ್ ಎಂಬುವರು ಗುರುವಾರ (ಏ.2) ಹಲ್ಲೆ ನಡೆಸಿದ್ದರು.

ಹಲ್ಲೆ ಘಟನೆ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್‌, ‘ಕೆ.ಸಿ ವ್ಯಾಲಿ ಯೋಜನೆ ಕಾಲುವೆಗಳ ಅಕ್ಕಪಕ್ಕದ ಜಮೀನುಗಳಲ್ಲಿ ನಿಯಮಬಾಹಿರವಾಗಿ ಕೊಳವೆ ಬಾವಿ ಕೊರೆದು ನೀರು ಕಳವು ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಸೀತಿಹೊಸೂರು ಗ್ರಾಮಸ್ಥರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.