ADVERTISEMENT

ಗ್ರಾಹಕರ ಸಮಸ್ಯೆ ಬಗೆಹರಿಸುತ್ತೇವೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 14:36 IST
Last Updated 13 ಆಗಸ್ಟ್ 2019, 14:36 IST

ಕೋಲಾರ: ‘ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕ್‌ ಕಾರ್ಯ ನಿರ್ವಹಿಸುತ್ತಿದೆ. ಗ್ರಾಹಕರು ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಬಗೆಹರಿಸುತ್ತೇವೆ’ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ವಲಯ ಪ್ರಧಾನ ವ್ಯವಸ್ಥಾಪಕ ವಿ.ಎಸ್‌.ಸಂಜಯ್ ತಿಳಿಸಿದರು.

ಎಸ್‌ಬಿಐ ಬ್ಯಾಂಕ್‌ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿ, ‘ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್‌ ಅನೇಕ ಸೌಕರ್ಯ ಕಲ್ಪಿಸಿದೆ. ಗ್ರಾಹಕರ ಇದರ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ಸಾಲ ನೀಡಲಾಗುತ್ತಿದೆ. ಸಾಲ ಪಡೆದವರು ಪ್ರಮಾಣಿಕವಾಗಿ ಮರು ಪಾವತಿ ಮಾಡುತ್ತಿದ್ದಾರೆ. ಸಕಾಲಕ್ಕೆ ಸಾಲದ ಕಂತು ಪಾವತಿಸದಿದ್ದರೆ ಸಬ್ಸಿಡಿ ಮಂಜೂರಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ ಶೇ 75ರಷ್ಟು ಮಂದಿ ನೆಟ್ ಬ್ಯಾಂಕ್ ಮೂಲಕ ವಹಿವಾಟು ನಡೆಸುತ್ತಿದ್ದಾರೆ. 10 ಲಕ್ಷ ಮಂದಿ ₹ 5 ಲಕ್ಷದವರೆಗೆ ಸಾಲ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ವಹಿವಾಟು ವೃದ್ಧಿಯಾಗುತ್ತಿದ್ದು, ಬ್ಯಾಂಕ್‌ ದೇಶದಲ್ಲೇ ಪ್ರತಿಷ್ಠಿತ ಬ್ಯಾಂಕ್‌ ಆಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಉದ್ದಿಮೆದಾರರು ಬ್ಯಾಂಕ್‌ನಲ್ಲಿ ಸಾಲ ಪಡೆಯುವುದಕ್ಕೂ ಮುನ್ನ ಕೈಗಾರಿಕೆ ಆರಂಭಿಸುವ ಬಗ್ಗೆ ಅರಿವು ಪಡೆದುಕೊಳ್ಳುವುದು ಉತ್ತಮ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಸುರೇಶ್‌ ಅಭಿಪ್ರಾಯಪಟ್ಟರು.

‘ಉದ್ಯಮಿಗಳು ಪ್ರತಿ ವಿಚಾರಕ್ಕೂ ವಕೀಲರು ಹಾಗೂ ಸನ್ನದು ಲೆಕ್ಕಿಗರ ಮೇಲೆ ಅವಲಂಬಿತರಾಗಬಾರದು. ಸರ್ಕಾರದ ಕಾನೂನು ತಿಳಿಯಬೇಕು. ಸರಕು ಮತ್ತು ಸೇವಾ ತೆರಿಗೆ ಕುರಿತು ತರಬೇತಿ ನೀಡಿದಾಗ ನಿರೀಕ್ಷಿತ ಮಟ್ಟದಲ್ಲಿ ಉದ್ಯಮಿಗಳು ಪಾಲ್ಗೊಳ್ಳಲಿಲ್ಲ. ಉದ್ಯಮಿಗಳು ಬ್ಯಾಂಕ್‌ನಲ್ಲಿ ಗಂಟೆಗಟ್ಟಲೇ ಸಾಲಿನಲ್ಲಿ ನಿಲ್ಲಲು ಆಗುವುದಿಲ್ಲ. ಆದ ಕಾರಣ ಹಣ ಪಾವತಿ ಕೌಂಟರ್‌ಗಳನ್ನು ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ವಸಂತ್‌ಕುಮಾರ್, ಸನ್ನದು ಲೆಕ್ಕಿಗ ದೇವರಾಜ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ರವಿಚಂದ್ರನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.