ADVERTISEMENT

ನೇಕಾರರು ಅಭಿವೃದ್ಧಿ ಪಥದಲ್ಲಿ ಸಾಗಿ

ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಸೌಮ್ಯ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 14:16 IST
Last Updated 7 ಆಗಸ್ಟ್ 2019, 14:16 IST
ಕೋಲಾರದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ ಮಾತನಾಡಿದರು.
ಕೋಲಾರದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ ಮಾತನಾಡಿದರು.   

ಕೋಲಾರ: ‘ರಾಜ್ಯದ ನೇಕಾರರು ಸುಧಾರಿತ ತಂತ್ರಜ್ಞಾನ ಮತ್ತು ಆಧುನೀಕರಣ ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಬೇಕು’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ ಕಿವಿಮಾತು ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲೆಯ ನೇಕಾರರ ಸಹಕಾರ ಸಂಘಗಳ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಮಾತನಾಡಿ, ‘ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ನೇಕಾರರಿಗೆ ಹೋಲಿಸಿದರೆ ರಾಜ್ಯದ ನೇಕಾರರು ತಂತ್ರಜ್ಞಾನ ಅಳವಡಿಕೆಯಲ್ಲಿ ಸಾಕಷ್ಟು ಹಿಂದುಳಿದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ನೇಕಾರರ ವೃತ್ತಿಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಹಲವು ಸೌಲಭ್ಯಗಳಿವೆ. ಆದರೆ, ನೇಕಾರರಿಗೆ ಇಲಾಖೆಯ ಸೌಲಭ್ಯ ಹಾಗೂ ಯೋಜನೆಗಳ ಬಗ್ಗೆ ಅರಿವಿಲ್ಲ. ಹೀಗಾಗಿ ನೇಕಾರರು ನಷ್ಟದ ಸ್ಥಿತಿಯಲ್ಲಿ ಕಸುಬು ಮುಂದುವರಿಸಿದ್ದಾರೆ. ನಷ್ಟದ ಕಾರಣಕ್ಕೆ ಕೆಲವರು ವೃತ್ತಿಯಿಂದ ದೂರವಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಕೈಮಗ್ಗ ಉದ್ಯಮ ಅಭಿವೃದ್ಧಿಪಡಿಸುವ ಸಲುವಾಗಿ ಇಲಾಖೆಯಿಂದ ಸಕಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೈಮಗ್ಗದ ಉತ್ಪನ್ನಗಳ ಉತ್ಪಾದನೆಯಿಂದ ಹಿಡಿದು ಮಾರುಕಟ್ಟೆವರೆಗೆ ವ್ಯವಸ್ಥೆ ಕಲ್ಪಿಸುವುದು ಇಲಾಖೆ ಜವಾಬ್ದಾರಿ. ಈ ನಿಟ್ಟಿನಲ್ಲಿ ನೇಕಾರರನ್ನು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಧ್ಯಯನ ಪ್ರವಾಸ ಕಳುಹಿಸಲಾಗುತ್ತದೆ’ ಎಂದು ವಿವರಿಸಿದರು.

‘ಕೈಮಗ್ಗದ ಹಾಗೂ ವಿದ್ಯುತ್‌ಚಾಲಿತ ಮಗ್ಗದ ಉತ್ಪನ್ನಗಳಿಗೆ ಗುಣಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಕೈಮಗ್ಗಕ್ಕೆ ಸಂಬಂಧಿಸಿದಂತೆ ಕಾಯಿದೆ ಜಾರಿಯಲ್ಲಿದ್ದು, ಕೆಲ ಉತ್ಪನ್ನಗಳನ್ನು ವಿದ್ಯುತ್‌ಚಾಲಿತ ಮಗ್ಗಗಳಲ್ಲಿ ತಯಾರಿಸದಂತೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಹಾಯಧನ: ‘ಕೈಮಗ್ಗ ಉದ್ಯಮಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಸಬ್ಸಿಡಿ ನೀಡಲಾಗುವುದು. ಕೈಮಗ್ಗ ಸಹಕಾರ ಸಂಘಗಳಿಂದ ಉತ್ಪನ್ನ ಖರೀದಿಸುವ ಗ್ರಾಹಕರಿಗೆ ಶೇ 20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನೇಯ್ಗೆ ಬಟ್ಟೆಗಳ ಮಾರಾಟಕ್ಕೆ ಮಳಿಗೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿರುವ ಕೌಶಲಾಭಿವೃದ್ಧಿ ತರಬೇತಿ ಕೇಂದ್ರಗಳಲ್ಲಿ ನೇಕಾರರಿಗೆ ಉಚಿತವಾಗಿ 45 ದಿನ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ತಿಂಗಳಿಗೆ ₹ 3,500 ಗೌರವಧನ ಸಹ ಕೊಡಲಾಗುತ್ತದೆ. ತರಬೇತಿ ಬಳಿಕ ಪೂರ್ಣಗೊಂಡ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುತ್ತಿದ್ದೇವೆ’ ಎಂದರು.

ಖಾತೆ ತೆರೆದಿರಬೇಕು: ‘ನೇಕಾರರು ಸಾಲ ಸೌಲಭ್ಯ ಪಡೆಯಲು ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿರಬೇಕು. ಜತೆಗೆ ಆ ಖಾತೆಯಲ್ಲಿ ಕನಿಷ್ಠ ವ್ಯವಹಾರ ಮಾಡಿರಲೇಬೇಕು’ ಎಂದು ಆರ್ಥಿಕ ಸಾಕ್ಷರತೆ ಕೋಲಾರ ಶಾಖೆ ಅಧಿಕಾರಿ ಎಂ.ಚಂದ್ರಪ್ಪ ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ರವಿಚಂದ್ರ, ಜಿಲ್ಲಾ ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಹೊಸಮಠ್, ಕೈಗಾರಿಕಾ ವಿಸ್ತರಣಾಧಿಕಾರಿ ಗೀತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.