ADVERTISEMENT

ಬೆಟ್ಟಕ್ಕೆ ದಾರಿ ನಿರ್ಮಾಣ ವೇಳೆ ಬೆಂಕಿ: ವ್ಯಕ್ತಿ ಆಹುತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 6:23 IST
Last Updated 17 ಮಾರ್ಚ್ 2023, 6:23 IST

ಮಾಲೂರು: ಯುಗಾದಿ ಹಬ್ಬದ ದಿನಕ್ಕೆ ಟೇಕಲ್‌ ಹೋಬಳಿಯ ಉಳ್ಳೇರಹಳ್ಳಿ ಭೂತಮ್ಮನ ಬೆಟ್ಟದಲ್ಲಿ ಜ್ಯೋತಿ ಬೆಳಗಿಸಲು ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಬುಧವಾರ ಕಾಲುದಾರಿ ನಿರ್ಮಿಸುವ ವೇಳೆ ಬೆಂಕಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಉಳ್ಳೇರಹಳ್ಳಿ ಗ್ರಾಮದ ನಿಕ್ಕಪ್ಪ (63) ಮೃತ ವ್ಯಕ್ತಿ. ಅವರ ಸಂಬಂಧಿ ಪ್ರಕಾಶ್‌ (25) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಬುಧವಾರ ನಡೆದ ಘಟನೆ ಬಗ್ಗೆ ಮಾಹಿತಿ ನೀಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿಕ್ರಿಯೆ ಪಡೆಯಲು ಕರೆಯನ್ನೂ ಸ್ವೀಕರಿಸುತ್ತಿಲ್ಲ.

ADVERTISEMENT

‘ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಘಟನೆ ನಡೆದಿದೆ. ದಾರಿ ಮಾಡಿಕೊಳ್ಳಲು ಜನರೇ ಬೆಂಕಿ ಹಾಕಿರುವ ಮಾಹಿತಿ ಬಂದಿದೆ. ಅರಣ್ಯ ಇಲಾಖೆಯಿಂದಲೂ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ’ ಎಂದು ಡಿಸಿಎಫ್‌ ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಟ್ಟದಲ್ಲಿ ಯುಗಾದಿ ದಿನ ಸಂಜೆ ಗ್ರಾಮಸ್ಥರು ಪ್ರತಿ ವರ್ಷ ದೀಪ ಹಚ್ಚುತ್ತಾರೆ. ಈ ಬಾರಿ ಮಾರ್ಚ್‌ 22ರಂದು ನಡೆಯಲಿರುವ ಹಬ್ಬಕ್ಕೆ ನಿಕ್ಕಪ್ಪ ಗಿಡ ಕಿತ್ತು, ಕಸ ತೆಗೆದು ಹಾಕಿ ಕಾಲುದಾರಿ ಮಾಡುತ್ತಿದ್ದರು. ಗ್ರಾಮದಿಂದ 1.5 ಕಿ.ಮೀ ದೂರವಿರುವ ಈ ಕಾಲುದಾರಿಯನ್ನು ಪ್ರತಿ ವರ್ಷವೂ ಅವರೇ ಸ್ವಚ್ಛಪಡಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.