ADVERTISEMENT

ರಾಜ್ಯ ಶಿಕ್ಷಣ ನೀತಿ ಜಾರಿಗೆ ಪ್ರಯತ್ನ: ಸಚಿವ ‌ಸುಧಾಕರ್‌

'ಉದ್ಯೋಗಾವಕಾಶ ಕಲ್ಪಿಸುವ ಶಿಕ್ಷಣ ನಮ್ಮದಾಗಬೇಕು'

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 16:37 IST
Last Updated 4 ಜುಲೈ 2023, 16:37 IST
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್   

ಕೋಲಾರ: ‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಿಗೆ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಸರ್ಕಾರವು ಸ್ಪಷ್ಟವಾಗಿ ಪ್ರಕಟಿಸಲಾಗಿದೆ. ಈ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರೊಂದಿಗೆ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಶೀಘ್ರದಲ್ಲಿಯೇ ಉತ್ತಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಮಂಗಳವಾರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಘಟಿಕೋತ್ಸವ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿದ್ಯಾರ್ಥಿಗಳು ಎರಡು ವರ್ಷಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿಯಡಿ ವ್ಯಾಸಂಗ ಮಾಡುತ್ತಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಯೋಚನೆ ಮಾಡಿ ಕೆಲವೊಂದು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಯಾವ ಯಾವ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ವಿದ್ಯಾರ್ಥಿಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸಕಾರಾತ್ಮಕ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

‘ಹೊಸ ನೀತಿ ಜಾರಿ ಮಾಡಬೇಕಾದರೆ ಮೂಲಸೌಕರ್ಯ ಅಗತ್ಯ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪುಸ್ತಕದ ಜ್ಞಾನದೊಂದಿಗೆ ಕೌಶಲಾಭಿವೃದ್ಧಿಯ ಶಿಕ್ಷಣವೂ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ವಿಚಾರವಿದ್ದರೂ ಪೂರಕ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ, ಬಹಳಷ್ಟು ಗೊಂದಲಗಳಿವೆ. ಯಾರನ್ನೋ ಮೆಚ್ಚಿಸಲು ಅಳವಡಿಸಿಕೊಂಡಿದ್ದೇವೆ ಎಂಬ ಹೆಗ್ಗಳಿಕೆಯ ಆತುರ ನಮ್ಮ ರಾಜ್ಯಕ್ಕೆ ಅವಶ್ಯವಿಲ್ಲ’ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದರು.

ADVERTISEMENT

‘ಉದ್ಯೋಗಾವಕಾಶ ಕಲ್ಪಿಸುವ ಶಿಕ್ಷಣ ನಮ್ಮದಾಗಬೇಕು. ನಮ್ಮ ಸರ್ಕಾರ ಐದು ವರ್ಷಗಳಲ್ಲಿ 2.5 ಲಕ್ಷ ಖಾಲಿ ಹುದ್ದೆ ಭರ್ತಿ ಮಾಡುವುದಾಗಿ ಘೋಷಿಸಿದೆ. ಆಗ ಕಾಲೇಜುಗಳಿಗೂ ಇದರ ಲಾಭ ಸಿಗುತ್ತದೆ’
ಎಂದರು.

ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ, ‘ಕುಮಾರಸ್ವಾಮಿ ಅವರಿಂದ ಸಿದ್ದರಾಮಯ್ಯ ಕಲಿಯುಬೇಕಾದ್ದು ಏನೂ ಇಲ್ಲ. ಬಹಳ ಜವಾಬ್ದಾರಿಯಿಂದ ನಮ್ಮ ಸರ್ಕಾರ ಹೆಜ್ಜೆ ಇಡುತ್ತಿದೆ. ಕುಮಾರಸ್ವಾಮಿ ಅವರದ್ದು ರಾಜಕೀಯ ಹೇಳಿಕೆ’ ಎಂದು ಟೀಕಿಸಿದರು.

ಎತ್ತಿನಹೊಳೆ ಯೋಜನೆ ಕುರಿತು ಪ್ರತಿಕ್ರಿಯಿಸಿ, ‘5 ವರ್ಷಗಳಿಂದ ಕುಂಠಿತವಾಗಿದೆ. ಈಗಾಗಲೇ ನಾವು ಬಹಳಷ್ಟು ಚರ್ಚೆ ಮಾಡಿದ್ದೇವೆ. ಎಲ್ಲೆಲ್ಲಿ ನೀರು ತರಬೇಕೆನ್ನುವುದನ್ನು ಗಮನಿಸಲಾಗಿದೆ. ಬೃಹತ್‌ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ’ ಎಂದರು.

ಕಾಲೇಜಿಗಿಂತ ಆಸ್ಪತ್ರೆ ಬೇಕು

‘ಕೋಲಾರ ಜಿಲ್ಲೆಗೆ ವೈದ್ಯಕೀಯ ಕಾಲೇಜಿಗಿಂತ ಮಲ್ಟಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ಬೇಕಿದೆ. ವೈದ್ಯಕೀಯ ಕಾಲೇಜಿನಿಂದ ಹೊಸ ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆ ನನಗಿಲ್ಲ. ಜಿಲ್ಲೆಯ ನಾಯಕರೊಂದಿಗೆ ಚರ್ಚಿಸಿ ಆಸ್ಪತ್ರೆ ಸ್ಥಾಪನೆಗೆ ಕ್ರಮ ವಹಿಸಲಾಗುವುದು’ ಎಂದು ಸುಧಾಕರ್‌ ತಿಳಿಸಿದರು.

‘ರಾಜಕೀಯ ತೆವಲಿಗೆ ವಿಭಜನೆ’

ಕೋಲಾರ–ಚಿಕ್ಕಬಳ್ಳಾಪುರ ಹಾಲು ಸಹಕಾರ ಒಕ್ಕೂಟ ವಿಭಜನೆಗೆ ಕಾಂಗ್ರೆಸ್‌ ಸರ್ಕಾರ ತಡೆ ಸಂಬಂಧ ಪ್ರತಿಕ್ರಿಯಿಸಿ ‘ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಮೆಗಾ ಡೇರಿ ಸ್ಥಾಪಿಸಲಾಗಿದೆ. ಯಾವುದೋ ಒಂದು ವ್ಯವಸ್ಥೆಯಲ್ಲಿ ಆಸ್ತಿ ಮತ್ತು ಜವಾಬ್ದಾರಿಗಳನ್ನು ಅಳೆದು ತೂಗಿ ಲಾಭ ನಷ್ಟ ಹಾಗೂ ಸಾಲಗಳನ್ನು ಸಮನಾಗಿ ವಿಭಜನೆ ಮಾಡಿ ವಿಭಜಿಸುವುದು ವ್ಯವಸ್ಥೆಯ ಮಾನದಂಡವಾಗಿದೆ. ಯಾವುದೂ ರಾಜಕೀಯ ತೆವಲಿಗೆ ಅಥವಾ ಅಧಿಕಾರದಲ್ಲಿ ಯಾರನ್ನು ತಂದು ಕೂರಿಸಲು ಏಕಾಏಕಿ ಮಾಡಿದರೆ ಹೇಗೆ? ಮುಂದೊಂದು ದಿನ ವಿಭಜನೆ ಆಗಲೇಬೇಕು. ಆದರೆ ವ್ಯವಸ್ಥಿತವಾಗಿ ಕೆಲಸ ನಡೆಯಬೇಕು’ ಎಂದು ಸಚಿವ ಡಾ.ಎಂ.ಸಿ.ಸುಧಾಕರ್‌ ಮಾಜಿ ಸಚಿವ  ಡಾ.ಕೆ.ಸುಧಾಕರ್‌ ಅವರಿಗೆ ತಿರುಗೇಟು ನೀಡಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.