ADVERTISEMENT

ಕೋಲಾರ | ಸಾಲ ವಸೂಲಿಗೆ ಬಂದ ಅಧಿಕಾರಿಯನ್ನು ಕಟ್ಟಿ ಹಾಕಲು ಮುಂದಾದ ಮಹಿಳೆಯರು!

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 12:54 IST
Last Updated 16 ಜೂನ್ 2023, 12:54 IST
   

ಮುಳಬಾಗಿಲು (ಕೋಲಾರ): ಸ್ತ್ರೀಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್‍ನಿಂದ ಕೊಟ್ಟಿದ್ದ ಸಾಲ ಮರುಪಾವತಿಸುವಂತೆ ಕೋರಿದ ಅಧಿಕಾರಿಯನ್ನು ತಾಲ್ಲೂಕಿನ ಬೈರಕೂರು ಹೋಬಳಿಯ ಹಿರಣ್ಯ ಗೌಡನಹಳ್ಳಿ ಮಹಿಳೆಯರು ಶುಕ್ರವಾರ ಹಗ್ಗದಿಂದ ಕಟ್ಟಿ ಹಾಕಲು ಪ್ರಯತ್ನಿಸಿದ್ದಾರೆ.

ಸಾಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಯಾವುದೇ ಕಾರಣಕ್ಕೂ ಸಾಲ ಪಾವತಿಸುವುದಿಲ್ಲವೆಂದು ಪಟ್ಟು ಹಿಡಿದು ಬೈರಕೂರಿನ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಡಿಸಿಸಿ ಬ್ಯಾಂಕ್‌ನಿಂದ ಈ ಸಂಘದವರು ಮಹಿಳೆಯರಿಗೆ ಸಾಲ ನೀಡಿದ್ದಾರೆ. ‌ಎಂಟು ಸಂಘಗಳಿಗೆ ₹ 40 ಲಕ್ಷ ಸಾಲ‌ ವಿತರಿಸಲಾಗಿದೆ.

ಎಂಟೂ ಸಂಘಗಳ ಮಹಿಳೆಯರು ಒಂದಾಗಿ, ‘ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕೆ ಬಂದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಡಿಸಿಸಿ ಬ್ಯಾಂಕ್‌ನಿಂದ ನೀಡಿದ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. ಆದ್ದರಿಂದ ಯಾರೂ ಸಾಲ ಪಾವತಿಸುವುದಿಲ್ಲ’ ಎಂದು ಪಟ್ಟು ಹಿಡಿದರು.

ADVERTISEMENT

ಆಗ ಅಧಿಕಾರಿ ನಾಗರಾಜ್‌, ‘ಸಾಲ ಮನ್ನಾ ಕುರಿತು ಸರ್ಕಾರ ಯಾವುದೇ ಆದೇಶ ಮಾಡಿಲ್ಲ. ಈಗ ಸಾಲವನ್ನು ಕಟ್ಟಲೇಬೇಕು’ ಎಂದು ಕೇಳಿದರು.

ಆಗ ಸಾಲ ಪಾವತಿ ಸಂಬಂಧ ಅಧಿಕಾರಿ ತಂದಿದ್ದ ದಾಖಲಾತಿ ಪತ್ರಗಳನ್ನು ಕಿತ್ತುಕೊಂಡ ಮಹಿಳೆಯರು ಹರಿದು ಹಾಕಿದರು. ಹಗ್ಗ ತಂದು ಅಧಿಕಾರಿಯನ್ನು ಹಿಡಿದು ಕಟ್ಟಿ ಹಾಕಲು ಪ್ರಯತ್ನಿಸಿದರು. ಆಗ ಅಲ್ಲಿಯೇ ಇದ್ದ ಕೆಲ ಪುರುಷರು ಆ ಅಧಿಕಾರಿಯನ್ನು ಬಿಡಿಸಿದರು.

ಸಿದ್ದರಾಮಯ್ಯ ಅವರ ಹೇಳಿಕೆ ಬಂದಿರುವ ಪತ್ರಿಕೆಗಳನ್ನು ತೋರಿಸಿ ಅಧಿಕಾರಿಯನ್ನು ಹೊರ ಕಳುಹಿಸಿದರು.

ಮಹಿಳೆಯರು ನಿಂದಿಸಿದರು: ಅಧಿಕಾರಿ ಬೇಸರ
‘ಶುಕ್ರವಾರ ಬೆಳಿಗ್ಗೆ 9.30ರ ಸಮಯದಲ್ಲಿ ಹಿರಣ್ಯ ಗೌಡನಹಳ್ಳಿಗೆ ಹೋಗಿ ಎಂಟು ಸಂಘಗಳು ಪಡೆದಿದ್ದ ಸಾಲದ ಕಂತನ್ನು ಪಾವತಿಸುವಂತೆ ಕೋರಿದೆ. ಆಗ ಮಹಿಳೆಯರು ಕೆಟ್ಟದಾಗಿ ನನ್ನನ್ನು ನಿಂದಿಸಿ, ಹಗ್ಗ ತಂದು ಕಟ್ಟಿ ಹಾಕಲು ಯತ್ನಿಸಿದರು. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರೂ ಕೇಳಲಿಲ್ಲ. ಈ ರೀತಿ ಮಾಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದೇನೆ’ ಎಂದು ವ್ಯವಸಾಯ ಸಹಕಾರಿ ಸೇವಾ ಸಂಘದ ಕಾರ್ಯದರ್ಶಿ ನಾಗರಾಜ್ ತಿಳಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಪ್ರತಿಕ್ರಿಯಿಸಿ, ‘‌ಬಡ್ಡಿ ರಹಿತ ಹಾಗೂ ಆಧಾರ ಸಾಲ ನೀಡಲಾಗಿದೆ. ಸಾಲಮನ್ನಾ ಸಂಬಂಧ ಸರ್ಕಾರದಿಂದ ನಮಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ, ಎಲ್ಲಾ ಸಂಘಗಳು ಸಾಲ ಪಾವತಿಸಲೇ ಬೇಕು.‌ ಸರ್ಕಾರಕ್ಕೆ ಡಿಸಿಸಿ ಬ್ಯಾಂಕ್‌ನಿಂದ ಪತ್ರ ಬರೆದು ಮಾಹಿತಿ ತರಿಸಿಕೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.