ADVERTISEMENT

ನೀರಿನ ಸಮಸ್ಯೆ ಗಂಭೀರತೆ ಅರಿತು ಕೆಲಸ ಮಾಡಿ

ಸಭೆಯಲ್ಲಿ ಪಿಡಿಒಗಳಿಗೆ ಜಿ.ಪಂ ಸಿಇಒ ಜಗದೀಶ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 7:29 IST
Last Updated 13 ಏಪ್ರಿಲ್ 2019, 7:29 IST
ಕುಡಿಯುವ ನೀರಿನ ಸಮಸ್ಯೆ ಸಂಬಂಧ ಕೋಲಾರದಲ್ಲಿ ಶುಕ್ರವಾರ ನಡೆದ ಪಿಡಿಒಗಳ ಸಭೆಯಲ್ಲಿ ಜಿ.ಪಂ ಸಿಇಒ ಜಿ.ಜಗದೀಶ್‌ ಮಾತನಾಡಿದರು.
ಕುಡಿಯುವ ನೀರಿನ ಸಮಸ್ಯೆ ಸಂಬಂಧ ಕೋಲಾರದಲ್ಲಿ ಶುಕ್ರವಾರ ನಡೆದ ಪಿಡಿಒಗಳ ಸಭೆಯಲ್ಲಿ ಜಿ.ಪಂ ಸಿಇಒ ಜಿ.ಜಗದೀಶ್‌ ಮಾತನಾಡಿದರು.   

ಕೋಲಾರ: ‘ಗ್ರಾಮೀಣ ಭಾಗದಲ್ಲಿ ಮುಖ್ಯ ಪೈಪ್‌ಲೈನ್‌ನಿಂದ ಮನೆಗಳ ತೊಟ್ಟಿಗೆ (ಸಂಪ್‌) ನೀರಿನ ಸಂಪರ್ಕ ಪಡೆದುಕೊಂಡಿರುವುದನ್ನು ಕಡಿತಗೊಳಿಸಬೇಕು. ಇಲ್ಲದಿದ್ದರೆ ಪಿಡಿಒಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಸಂಬಂಧ ಕೋಲಾರ ಹಾಗೂ ಶ್ರೀನಿವಾಸಪುರ ತಾಲ್ಲೂಕು ವ್ಯಾಪ್ತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಇಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಸಂಪ್‌ಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಆದೇಶ ಹೊರಡಿಸಿ ತಿಂಗಳಾಗಿದೆ. ಆದರೂ ಪಿಡಿಒಗಳು ಯಾಕೆ ಕ್ರಮ ಕೈಗೊಂಡಿಲ್ಲ?’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ದಿನೇ ದಿನೇ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಅಧಿಕಾರಿಗಳು ಸಮಸ್ಯೆಯ ಗಂಭೀರತೆ ಅರಿತು ಕೆಲಸ ಮಾಡಬೇಕು. ತುರ್ತು ಸಂದರ್ಭ ಎದುರಾದಾಗ ಕೊಳವೆ ಬಾವಿ ಕೊರೆಸಬೇಕು. ನೀರು ಸಿಗುವುದಿಲ್ಲವೆಂಬ ಅನುಮಾನವಿದ್ದರೆ ಟ್ಯಾಂಕರ್‌ ಅಥವಾ ಖಾಸಗಿ ಕೊಳವೆ ಬಾವಿ ಮೂಲಕ ನೀರು ಕಲ್ಪಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಹಬ್ಬ ಮಾಡಿಕೊಳ್ಳಲು ಮನೆಯ ಸಂಪ್‌ಗೆ ನೀರು ಬಿಡಲು ಆಗಲ್ಲ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಕೊಡುವುದು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ. ನಲ್ಲಿಗಳ ಮೂಲಕ ನೀರು ಬಿಡಬೇಕು. ನಿಗದಿಪಡಿಸಿರುವ ದರವನ್ನೇ ಟ್ಯಾಂಕರ್‌ ಮಾಲೀಕರಿಗೆ ಪಾವತಿಸಬೇಕು’ ಎಂದು ತಿಳಿಸಿದರು.

ಬಿಲ್ ಪಾವತಿಸುವುದಿಲ್ಲ: ‘ಯಾವುದೇ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮೊದಲು ನನಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಬೇಕು. ಅದಕ್ಕೆ ಒಪ್ಪಿಗೆ ನೀಡಿದರೆ ಮಾತ್ರ ನೀರು ಸರಬರಾಜು ಮಾಡಬೇಕು. ಅನುಮೋದನೆ ಇಲ್ಲದೆ ಸರಬರಾಜು ಮಾಡಿದರೆ ಬಿಲ್ ಪಾವತಿಸುವುದಿಲ್ಲ. ಆ ಬಿಲ್‌ನ ಮೊತ್ತವನ್ನೇ ಪಿಡಿಒಗಳೇ ಪಾವತಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ವಿಳಂಬ ಮಾಡುತ್ತಿದ್ದಾರೆ: ‘ಎಂಜಿನಿಯರ್‌ಗಳು 2 ದಿನಕ್ಕೊಮ್ಮೆ ಪಂಚಾಯಿತಿವಾರು ನೀರಿನ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೊಳವೆ ಬಾವಿ ಕೊರೆಸಿದರೂ ಪಂಚಾಯಿತಿ ಅಧಿಕಾರಿಗಳು ಪಂಪ್‌ ಮೋಟರ್‌ ನೀಡಲು ವಿಳಂಬ ಮಾಡುತ್ತಿದ್ದಾರೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಪ್ರಭಾರ) ಕಾರ್ಯ ನಿರ್ವಾಹಕ ಎಂಜಿನಿಯರ್‌ ಗುಳ್ಳಪ್ಪನವರ್‌ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ಹೊಸದಾಗಿ ಕೊರೆಸಿದ ಕೊಳವೆ ಬಾವಿ ತಕ್ಷಣ ಪಂಪ್‌ ಮೋಟರು ಅಳವಡಿಸಬೇಕು. ಪಂಚಾಯಿತಿಗಳಲ್ಲಿ ಹೆಚ್ಚುವರಿಯಾಗಿ ಪಂಪ್‌ ಮೋಟರ್‌ ಇಟ್ಟುಕೊಳ್ಳಲು ಸೂಚಿಸಲಾಗಿದೆ. ವಿಳಂಬ ಮಾಡಿದರೆ ಸುಮ್ಮನಿರುವುದಿಲ್ಲ. ನೀರಿನ ಸಮಸ್ಯೆಯ ಬಗ್ಗೆ ಗಂಭೀರತೆಯಿರಲಿ’ ಎಂದು ತಾಕೀತು ಮಾಡಿದರು.

ಪ್ರಾಮಾಣಿಕತೆ ಇರಬೇಕು: ‘ಕೆಲವು ಕಡೆ ಅಕ್ಕಪಕ್ಕದ ಗ್ರಾಮಗಳಿಂದ ಮತ್ತೊಂದು ಗ್ರಾಮಕ್ಕೆ ಕುಡಿಯಲು ನೀರು ಬಿಟ್ಟಿದ್ದಾರೆ. ಅಧಿಕಾರಿಗಳು ರೈತರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟರೆ ನೀರು ಬಿಡುತ್ತಾರೆ. ಹೊಟ್ಟೆ ಹಸಿವು ಎಂದವರಿಗೆ ಮೊದಲು ಅನ್ನ ಕೊಡುವವರು ರೈತರೇ. ಸಮಸ್ಯೆ ಬಗೆಹರಿಸಬೇಕೆಂಬ ಪ್ರಾಮಾಣಿಕತೆ ಅಧಿಕಾರಿಗಳಿಗೆ ಇರಬೇಕು’ ಎಂದು ತಿಳಿಸಿದರು.

‘ಒಂದೂವರೆ ತಿಂಗಳು ನೀರಿನ ಸಮಸ್ಯೆ ಬಗೆಹರಿಸಬೇಕು. ಮಳೆಯಾದರೆ ಸಮಸ್ಯೆ ನಿವಾರಣೆಯಾಗುತ್ತದೆ. 15 ದಿನಕ್ಕೊಮ್ಮೆ ಬಿಲ್ ಕಡ್ಡಾಯವಾಗಿ ಸಲ್ಲಿಸಿ, ಹಣ ಪಾವತಿಸಿ. 2016–17 ಸಾಲಿನ ನೀರಿನ ಬಾಕಿ ಬಿಲ್ ಪಾವತಿಸುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ರೀತಿ ಬಿಲ್‌ ಬಾಕಿ ಉಳಿಸಿಕೊಳ್ಳಬೇಡಿ’ ಎಂದರು.

ಮಾಹಿತಿ ಸಂಗ್ರಹಿಸಿ: ‘ಬೇಸಿಗೆ ಕಾರಣಕ್ಕೆ ಗ್ರಾಮಗಳಲ್ಲಿ ಸ್ಥಳೀಯ ಮುಖಂಡರು ವಿನಾಕರಣ ಕೊಳವೆ ಬಾವಿ ಕೊರೆಸುವಂತೆ ಒತ್ತಾಯಿಸುತ್ತಾರೆ. ಅಧಿಕಾರಿಗಳು ಒತ್ತಡಕ್ಕೆ ಮಣಿದು ಕೊಳವೆ ಬಾವಿ ಕೊರೆಸಬಾರದು. ಗ್ರಾಮದ ಜನರಿಂದ ವಸ್ತುಸ್ಥಿತಿಯ ಮಾಹಿತಿ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.