ಬಾಲ ಕಾರ್ಮಿಕರು
(ಪ್ರಾತಿನಿಧಿಕ ಚಿತ್ರ)
ಕೋಲಾರ: ಕೋಲಾರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ 17 ಮಕ್ಕಳನ್ನು ಜಿಲ್ಲೆಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
2024ರ ಏಪ್ರಿಲ್ 1ರಿಂದ ಈ ವರ್ಷದ ಮಾರ್ಚ್ 31ರವರೆಗೆ ವಿವಿಧ ಇಲಾಖೆಗಳ ಜೊತೆಗೂಡಿ ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕ ಪ್ರಕರಣಗಳು ದಾಖಲಾಗಿವೆ. ರಕ್ಷಣೆಗೆ ಒಳಗಾದವರ ಪೈಕಿ ಒಬ್ಬ ಬಾಲಕಿ ಕೂಡ ಇದ್ದಾಳೆ. ಐವರು ಬಿಹಾರ ರಾಜ್ಯದವರಾಗಿದ್ದು ಒಡಿಶಾ ಹಾಗೂ ನೇಪಾಳದ ತಲಾ ಒಬ್ಬರು ಸೇರಿದ್ದಾರೆ. ಉಳಿದ ಹತ್ತು ಮಕ್ಕಳು ಕರ್ನಾಟಕ ರಾಜ್ಯದವರು.
2023–24ನೇ ಸಾಲಿನಲ್ಲಿ ಕೈಗೊಂಡ ಕಾರ್ಯಾಚರಣೆಯಲ್ಲಿ 24 ಬಾಲ ಹಾಗೂ ಕಿಶೋರ ಕಾರ್ಮಿಕ ಪ್ರಕರಣಗಳು ಪತ್ತೆಯಾಗಿದ್ದವು.
ಗ್ಯಾರೇಜ್, ಹೋಟೆಲ್, ಬಾರ್‌ಗಳು, ಕಾರ್ಖಾನೆ, ಡಾಬಾ, ಅಂಗಡಿ, ಚಿಕನ್ ಸೆಂಟರ್, ಮಳಿಗೆಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ. 1986ರಲ್ಲಿಯೇ ಬಾಲ ಕಾರ್ಮಿಕ ಪದ್ಧತಿ ನಿಷೇಧಿಸಿ ಕಾಯ್ದೆ ಜಾರಿ ಮಾಡಿದ್ದರೂ ಈ ಪಿಡುಗು ಮುಂದುವರಿದಿದೆ.
‘17 ಮಕ್ಕಳನ್ನು ರಕ್ಷಿಸಿ ಪಾಲನೆ ಹಾಗೂ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಪುನರ್ವಸತಿ ಕೇಂದ್ರಗಳಿಗೆ ತಲುಪಿಸಲಾಗಿದೆ. ಕೆಲವರನ್ನು ಓದು ಬಿಡಿಸಿ ಕೆಲಸಕ್ಕೆ ಸೇರಿಸಿದ್ದು ಗಮನಕ್ಕೆ ಬಂತು. ಅಂಥ ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಲಾಗಿದೆ. ವಿವಿಧ ತರಗತಿಗಳಲ್ಲಿ ಚೆನ್ನಾಗಿ ಓದುತ್ತಿದ್ದಾರೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಆರ್.ವರಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯಿಂದ ಜೆಲ್ಲೆಯಾದ್ಯಂತ ನೂರಾರು ಜಾಗೃತಿ ಕಾರ್ಯಕ್ರಮ, ಜಾಥಾ, ಬೀದಿ ನಾಟಕಗಳನ್ನು ಆಯೋಜಿಸಿದ್ದರೂ ಈ ಅನಿಷ್ಠ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ನೂರಾರು ಕಡೆಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿರುವ ಗುಮಾನಿ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ.
ದುಡಿಮೆಗಾಗಿ ವಿವಿಧೆಡೆಯಿಂದ ನಗರಕ್ಕೆ ವಲಸೆ ಬಂದ ಕುಟುಂಬಗಳ ಮಕ್ಕಳು ನಗರದಲ್ಲಿಯೇ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಂಥವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಪ್ರಯತ್ನ ನಡೆಯುತ್ತಿದೆ.
ಮಕ್ಕಳನ್ನು ಉದ್ಯೋಗ ಅಥವಾ ಕೆಲಸಗಳಲ್ಲಿ ತೊಡಗಿಸಿಕೊಂಡ ಮಾಲೀಕರಿಗೆ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ₹20 ಸಾವಿರಕ್ಕಿಂತ ಕಡಿಮೆ ಇರದ ಹಾಗೂ ₹50 ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಎರಡೂ ವಿಧಿಸಲು ಅವಕಾಶವಿದೆ. 2024–25ನೇ ಸಾಲಿನಲ್ಲಿ ಆರು ಸಂಸ್ಥೆಯವರು ಒಟ್ಟು ₹1.20 ಲಕ್ಷ ದಂಡ ಪಾವತಿಸಿದ್ದಾರೆ. ಇದನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ಮಕ್ಕಳ ಹೆಸರಲ್ಲಿ ಠೇವಣಿ ಇಡಲಾಗಿದೆ.
ಬಾಲಕಾರ್ಮಿಕ ಪದ್ಧತಿ ವಿರುದ್ಧದ ದಿನವನ್ನು 2002ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಪರಿಚಯಿಸಿತು. ಈ ದಿನವೂ ಮಕ್ಕಳು ಬೆಳೆಯಲು, ಗೌರವಯುತ ಜೀವನ ನಡೆಸಲು ಮತ್ತು ಪ್ರಪಂಚದಾದ್ಯಂತ ಬಾಲಕಾರ್ಮಿಕ ಪದ್ಧತಿ ವಿರುದ್ಧ ಹೋರಾಡುವ ಅಗತ್ಯವನ್ನು ಒತ್ತಾಯಿಸುತ್ತದೆ.
‘ಬರೀ ಜಾಗೃತಿ ಮೂಡಿಸಿದರಷ್ಟೇ ಸಾಲದು; ಸಂಬಂಧಿಸಿದ ಅಧಿಕಾರಿಗಳು ಅಥವಾ ತಹಶೀಲ್ದಾರರು ದಿಢೀರ್ ಭೇಟಿ ನೀಡಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಈಗಾಗಲೇ ಸೂಚನೆ ನೀಡಿದ್ದಾರೆ.
ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ಕಳೆದ ಸಾಲಿನಲ್ಲಿ 24 ಮಕ್ಕಳ ರಕ್ಷಣೆ ಪ್ರಕರಣ ದಾಖಲಿಸಿ ದಂಡ ವಸೂಲಿ
ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದ ಸಂಬಂಧಪಟ್ಟ ಮಾಲೀಕರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದೇವೆ. ಆರು ಸಂಸ್ಥೆಗಳು ತಲಾ ₹ 20 ಸಾವಿರ ದಂಡ ಪಾವತಿಸಿವೆಆರ್.ವರಲಕ್ಷ್ಮಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕೋಲಾರ
ಇಂದು ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ
ಜಿಲ್ಲಾಡಳಿತ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಗೆ ಕೋಲಾರ ನಗರದ ಗಾಂಧಿವನದಲ್ಲಿ ಜಾಥಾ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾಥಾವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿ.ಎ.ಮಂಜುನಾಥ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ.ಆರ್.ರವಿ ವಹಿಸುವರು.
ಪುನರ್ವಸತಿ ನಿಧಿ ಸ್ಥಾಪನೆ
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಪುನರ್ವಸತಿ ನಿಧಿ ಕೂಡ ಸ್ಥಾಪಿಸಲಾಗಿದೆ. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರಿಂದ ₹20 ಸಾವಿರ ಮೊತ್ತವನ್ನು ಪುನರ್ವಸತಿ ನಿಧಿಯಾಗಿ ವಸೂಲಿ ಮಾಡಲಾಗುವುದು. ನಿರ್ದಿಷ್ಟವಾಗಿ ಸರ್ಕಾರವು ಬಾಲ ಹಾಗೂ ಕಿಶೋರ ಕಾರ್ಮಿಕರ ಹೆಸರಿಗೆ ₹15 ಸಾವಿರವನ್ನು ಜಮೆಮಾಡಿ ಮಗುವಿನ ಹೆಸರಿನಲ್ಲಿ ಒಟ್ಟು ₹35 ಸಾವಿರ ಮೊತ್ತವನ್ನು ಸ್ಥಿರ ಠೇವಣಿ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.