
ಕೋಲಾರ: ಸಿದ್ದರಾಮಯ್ಯ ಮುಂದಿನ ಎರಡೂವರೆ ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿ, ‘ಯತೀಂದ್ರ ಈ ರೀತಿ ಮಾತನಾಡಬಾರದಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರಸ್ಪರ ತಮ್ಮ ಮನೆಗಳಲ್ಲಿ ತಿಂಡಿಗೆ ಸೇರುವ ಮೂಲಕ ಸಾಮರಸ್ಯವಾಗಿ ಇರುವುದಾಗಿ ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎನ್ನುತ್ತಿದ್ದಾರೆ. ಹೀಗಿರುವಾಗ 5 ಮತ್ತು 10 ವರ್ಷ ಇರುತ್ತಾರೆ ಎನ್ನುವುದು ಬಾಲಿಷ ಹೇಳಿಕೆಯಾಗಿದೆ’ ಎಂದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಸುಮ್ಮನೇ ಇರಬೇಕಾದರೆ ಯತೀಂದ್ರ ಅವರು ಈ ರೀತಿಯ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅಧಿವೇಶನದ ನಂತರ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಂಡ್ಯ ಮತ್ತು ರಾಮನಗರ ಶಾಸಕರು ಹೇಳಿಕೆ ಕುರಿತು, ‘ಕಾಂಗ್ರೆಸ್ ಪಕ್ಷದಲ್ಲಿ 140 ಶಾಸಕರಿದ್ದು, ಇಷ್ಟು ಜನ ಶಾಸಕರಲ್ಲಿ ಯಾರಾದರೂ ಮುಖ್ಯಮಂತ್ರಿ ಆದರೂ ಅಚ್ಚರಿ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲಾ ನಾಯಕರು ಬದ್ಧರಾಗಿರಬೇಕು. ಒಂದಿಬ್ಬರು ಶಾಸಕರು ಈ ರೀತಿ ಮಾತನಾಡುವುದು ತಪ್ಪು’ ಎಂದರು.
ಇದು ಪಕ್ಷದ ಶಿಸ್ತು, ಉಲ್ಲಂಘನೆ ಮಾಡಿದಂತೆ ಆಗುತ್ತದೆ, ಹೈಕಮಾಂಡ್ ಸಿದ್ದರಾಮಯ್ಯ ಅವರನೇ ಮುಂದುವರಿಸಿದರೆ ಸಂತೋಷ, ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೂ ಸಂತೋಷ. ಇಬ್ಬರನ್ನು ಬಿಟ್ಟು ದಲಿತರನ್ನು ಮಾಡಿದರೂ ಸಂತೋಷ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಡಿನ್ನರ್ ಪಾರ್ಟಿ ಕುರಿತು ಪ್ರಶ್ನೆಗೆ, ‘ಸ್ನೇಹಿತರ ಮನೆಯಲ್ಲಿ ಊಟ ಮಾಡುವುದು ಡಿನ್ನರ್ ಪಾರ್ಟಿ ಅಲ್ಲ. ಮುಖ್ಯಮಂತ್ರಿ ಊಟಕ್ಕೆ ಹೋಗುವಾಗ ಎಲ್ಲರನ್ನು ಕರೆಯುತ್ತಾರೆ. ಇದಕ್ಕೆ ಬಣ ಕಟ್ಟುವುದು ಬೇಡ ಎಂದರು.
ಮಾಜಿ ಸಂಸದ ಪ್ರತಾಪಸಿಂಹ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ ಎಂದಿರುವ ಕುರಿತು, ‘ಪ್ರತಾಪಸಿಂಹ ಸತ್ತು ಹೋಗಿರುವುದಕ್ಕೆ ಅವರಿಗೆ ಟಿಕೆಟ್ ನೀಡಿಲ್ಲ. ಅವರು ಉತ್ತಮ ಕೆಲಸ ಮಾಡಿದ್ದರೆ, ಬದುಕಿದ್ದರೆ ಅವರಿಗೆ ಟಿಕೆಟ್ ನೀಡುತ್ತಿದ್ದರು. ಮಾಧ್ಯಮದಲ್ಲೂ ಜಾಗ ಇಲ್ಲ, ರಾಜಕಾರಣದಲ್ಲೂ ಜಾಗ ಇಲ್ಲ. ಹಾಗಾಗಿ ಭ್ರಮೆಯಲ್ಲಿ ಇದ್ದಾರೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.