ADVERTISEMENT

ಅಂಗನವಾಡಿ ಕೇಂದ್ರ ಇನ್ನೂ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 9:05 IST
Last Updated 13 ಸೆಪ್ಟೆಂಬರ್ 2011, 9:05 IST

ಯಲಬುರ್ಗಾ: ತಾಲ್ಲೂಕಿನ ಮುಧೋಳ ಗ್ರಾಮದ ಪ್ರಮಖ ರಸ್ತೆಗೆ ಹೊಂದಿಕೊಂಡಿರುವ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ಸುಮಾರು ಎರಡು ವರ್ಷಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಪೂರ್ಣಗೊಳಿಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಸ್ಥಳೀಯ ಶರಣಪ್ಪ ಮುಧೋಳ, ನಾಗರಾಜ ಮ್ಯಾಗೇರಿ ಆರೋಪಿಸಿದ್ದಾರೆ.

ಕಳೆದೆರಡು ವರ್ಷಗಳ ಹಿಂದೆ ಗ್ರಾಮ ಸ್ವರಾಜ್ ಯೋಜನೆ ಅಡಿಯಲ್ಲಿ ಆರಂಭಗೊಂಡಿದ್ದ ಈ ಕಟ್ಟಡವು ವಿವಿಧ ಹಂತದ ಅನುದಾನದಲ್ಲಿ ಪ್ರತಿಶತ ತೊಂಬತ್ತರಷ್ಟು ಮಾತ್ರ ನಿರ್ಮಾಣವಾಗಿ ಇನ್ನೂ ಅಂತಿಮ ಕೆಲಸ ಬಾಕಿ ಉಳಿದಿದೆ. ಆದರೆ ಈ ಕಟ್ಟಡ ನಿರ್ಮಾಣದ ಗುತ್ತಿಗೆಪಡೆದಿದ್ದ ವ್ಯಕ್ತಿ ಮೃತನಾಗಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಹೇಳಲಾಗುತ್ತಿದೆ.

 ಆದರೆ ಗುತ್ತಿಗೆ ಪಡೆದ ವ್ಯಕ್ತಿ ಪೂರ್ಣಗೊಳಿಸುವ ಮುನ್ನವೆ ಲಭ್ಯವಿದ್ದ ಅನುದಾನವನ್ನು ಬಳಸಿಕೊಂಡಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಗುತ್ತಿಗೆ ಪಡೆದ ವ್ಯಕ್ತಿ ಮೃತಪಟ್ಟು ಎರಡು ವರ್ಷ ಕಳೆದರೂ ಕಟ್ಟಡ ಮುಕ್ತಾಯಕ್ಕೆ ಅಧಿಕಾರಿಗಳು ಪರ್ಯಾಯ ಕ್ರಮಕ್ಕೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯಿತಿ ಪಕ್ಕದಲ್ಲಿಯೇ ಇರುವ ಈ ಕಟ್ಟಡವು ಅಂಗನವಾಡಿ ಮಕ್ಕಳಿಗೆ ಅತ್ಯವಶ್ಯಕವಾಗಿರುವುದರಿಂದ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಅಥವಾ ಗ್ರಾಮ ಪಂಚಾಯತಿ ವತಿಯಿಂದ ಅನುದಾನ ಬಿಡುಗಡೆ ಮಾಡಿ ಪೂರ್ಣಗೊಳಿಸಿ ಮಕ್ಕಳ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರು ಆಗ್ರಹವಾಗಿದೆ.

ಬಹುತೇಕ ಭಾಗ ಮುಕ್ತಾಯವಾಗಿ ಕೇವಲ ಸ್ಪಲ್ಪಭಾಗ ಉಳಿದ ಈ ಕಟ್ಟಡ ಕಾಮಗಾರಿಯು ಕಳಪೆಯಾಗಿದ್ದರಿಂದ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲದೇ ಕಿಡಿಗೇಡಿಗಳ ಅಕ್ರಮ ಚಟುವಟಿಕೆ ತಾಣವಾದಂತಿದೆ. ಈ ಕಾರಣದಿಂದಾಗಿ ಸಂಬಂಧಪಟ್ಟವರು ತ್ವರಿತಗತಿಯಲ್ಲಿ ಇತ್ತ ಕಡೆ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕಾಗಿದೆ. ಈ ಬಗ್ಗೆ ಜಿಪಂ ಸದಸ್ಯರಿಗೂ, ಶಾಸಕರಿಗೂ ಹಾಗೂ ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಈಗಲಾದರೂ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.