ಗಂಗಾವತಿ: ರೂ,16 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡಿಸಿದ ಬೆನ್ನಲ್ಲೆ ನಗರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಗುಡ್ಡೆಕಲ್ ಬಸಪ್ಪ ನಾಯಕ ಅವರ ಮೇಲೆ ಒತ್ತಡ ಆರಂಭವಾದ ಹಿನ್ನೆಲೆ ಗುರುವಾರ ತಮ್ಮ ಸ್ಥಾನಕ್ಕೆ ವಿದಾಯ ಹೇಳಿದರು.
ಬುಧವಾರ ನಡೆದ ನಾಟಕೀಯ ಬೆಳವಣಿಗೆಯೊಂದರ ಪರಿಣಾಮ ಬಸಪ್ಪ ನಾಯಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಕೊಂಡರು. ಅದಕ್ಕೂ ಮುನ್ನ ಸಹದ್ಯೋಗಿ ಸದಸ್ಯರು ಒಪ್ಪಂದದಂತೆ ಸ್ಥಾನ ಬಿಟ್ಟುಕೊಡಿ ಎಂದು ಅಧ್ಯಕ್ಷರಿಗೆ ತಿಳಿಸಿದರು.
ಈ ಬಗ್ಗೆ ಹೈಕಮಾಂಡ್ ಹೇಳಿದ ಬಳಿಕವೇ ರಾಜೀನಾಮೆ ನೀಡುವುದಾಗಿ ಅಧ್ಯಕ್ಷ ಸ್ಪಸ್ಟಪಡಿಸಿದರು. ಈ ಹಿನ್ನೆಲೆ ಕಾಂಗ್ರೆಸ್‌ನ `ಒನ್ ಮ್ಯಾನ್ ಆರ್ಮಿ~ ಹೈಕಮಾಂಡ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ಎರಡು ಮೂರು ಗಂಟೆಕಾಲ ಸಭೆ ನಡೆಯಿತು ಎನ್ನಲಾಗಿದೆ.
ಒಪ್ಪಂದದಂತೆ: ಗಂಗಾವತಿ ನಗರಸಭೆಯ ಎರಡನೇ ಅವಧಿಯ 30 ತಿಂಗಳ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆ ಕಾಂಗ್ರೆಸ್ (ಆಗಿನ ಜೆಡಿಎಸ್) ಪಕ್ಷದಲ್ಲಿ ಕೇವಲ ಇಬ್ಬರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಿದ್ದರು.
ಇದನ್ನು ಮನಗಂಡ ಹೈಕಮಾಂಡ್ `ಎಲ್ಲರಿಗೂ ಸಮಾನ ಅವಕಾಶ~ ನೀತಿಯಡಿ ಅಧಿಕಾರ ಅವಧಿಯನ್ನು ತಲಾ ಹದಿನೈದು ತಿಂಗಳು ಹಂಚುವ ನಿರ್ಧಾರ ಕೈಗೊಂಡು ಮೊದಲ ಅವಧಿಗೆ ಬಸಪ್ಪ ನಾಯಕ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಿತ್ತು.
ಸೂಪರ್‌ಸೀಡ್ ಗುಮ್ಮ: ಅಧ್ಯಕ್ಷ ಅವಧಿ ಮೊದಲ ಹಂತ (ಹೈದಿನೈದು ತಿಂಗಳು) ಇನ್ನೇನು ಎರಡು ಮೂರು ತಿಂಗಳಲ್ಲಿ ಮುಗಿಯುತ್ತದೆ ಎಂಬ ಹಂತದಲ್ಲಿ ನಗರಸಭೆಯ ಆಡಳಿತ ಹಿಡಿದ ಕಾಂಗ್ರೆಸ್ ಧೋರಣೆ ಖಂಡಿಸಿ ಶಾಸಕ ಮುನವಳ್ಳಿ, ಸಂಸದ ಶಿವರಾಮಗೌಡ ಸೂಪರ್‌ಸೀಡ್ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು.
ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಬಸಪ್ಪ ನಾಯಕ್ ಸೂಪರ್‌ಸೀಡ್ ವಿರುದ್ದ ಕಾನೂನು ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಎರಡು ಮೂರು ತಿಂಗಳು ಕಾಲ ಹರಣವಾಯಿತು. ಈ ಹಿನ್ನೆಲೆ ಮತ್ತಷ್ಟು ಅವಧಿಗೆ ಮುಂದುವರೆಯುವುದಾಗಿ ಬಸಪ್ಪ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈಗಾಗಲೆ ಎರಡು ತಿಂಗಳು ಹೆಚ್ಚುವರಿ ಅವಧಿ ಮೀರಿದ್ದರಿಂದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅನ್ಸಾರಿ ಸೂಚಿಸಿದರು. ರಾಜೀನಾಮೆಯಿಂದ ತೆರವಾಗಲಿರುವ ಸ್ಥಾನಕ್ಕೆ ಉಳಿದ ಕೊನೆಯ ಅವಧಿಗೆ ಪಾಪಣ್ಣ ನಾಯಕ ಅಧ್ಯಕ್ಷರಾಗುವ ಸಂಭವ ಇದೆ ಎಂದು ಪಕ್ಷದ ಮೂಲ ತಿಳಿಸಿವೆ.
`ಹೈ~ ನಿರ್ಧಾರಕ್ಕೆ ಬದ್ಧ: ಕಳೆದ 20 ವರ್ಷಗಳ ಬಳಿಕ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆ ಅಧಿಕಾರ ಪಡೆಯುವಾಗ ಹೈಕಮಾಂಡ್ ನೀಡಿದ್ದ ಆದೇಶ ಸ್ವೀಕರಿಸಿದ್ದೆ. ಈಗಲೂ ಸಾಂಘಿ ಕ ನಿರ್ಧಾರಕ್ಕೆ ಬದ್ಧ ಎಂದು ಬಸಪ್ಪ ನಾಯಕ ಹೇಳಿದರು.
ಗುರುವಾರ ಕೊಪ್ಪಳಕ್ಕೆ ತೆರಳಿ ಜಿಲ್ಲಾಧಿಕಾರಿಗೆ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ಸಲ್ಲಿಸಿದ ಬಳಿಕ ಮಾತನಾಡಿದರು. ಈ ಸಂದರ್ಭದಲ್ಲಿ ಮನೋಹರಸ್ವಾಮಿ, ಮೊಹಮ್ಮದ್ ಫಾರೂಖ್‌ಸಾಬ, ಆರ್. ಕಣ್ಣನ್, ಉಸ್ಮಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.