ADVERTISEMENT

ಅನಾಥ ವ್ಯಕ್ತಿ ಪುನರ್ವಸತಿ ಕೇಂದ್ರಕ್ಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 10:35 IST
Last Updated 3 ಜೂನ್ 2013, 10:35 IST

ಗಂಗಾವತಿ: ಆನೆಗೊಂದಿ ರಸ್ತೆಯಲ್ಲಿರುವ ಹೊಟೇಲ್ ಲಲಿತ್ ಮಹಲ್ ಬಳಿ ಕಳೆದ ನಾಲ್ಕಾರು ತಿಂಗಳಿಂದ ಮಳೆ, ಗಾಳಿ, ಚಳಿ, ಬಿಸಿಲಿನ ಹೊಡೆತ ಸಹಿಸಿಕೊಂಡು ರಸ್ತೆಯ ಬದಿಯಲ್ಲಿಯೆ ಜೀವನ ನಡೆಸುತ್ತಿದ್ದ ಅನಾಥ ವ್ಯಕ್ತಿಗೆ ಕೊನೆಗೂ ಸಾಂತ್ವನ ದೊರೆತಿದೆ.

ರಸ್ತೆಯ ಬದಿಯ ಅನಾಥ ವ್ಯಕ್ತಿಯ ಬಗ್ಗೆ `ಪ್ರಜಾವಾಣಿ'ಯಲ್ಲಿ ಇತ್ತೀಚೆಗೆ ಪ್ರಕಟಗೊಂಡ ವರದಿ ಗಮನಿಸಿದ ಸಂಸದ ಎಸ್. ಶಿವರಾಮಗೌಡ ಕೂಡಲೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ. ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ, ತಾಲ್ಲೂಕು ಹಂತದ ಅಧಿಕಾರಿಗೆ ಸೂಚಿಸಿದ್ದಾರೆ. ಬಳಿಕ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಅನಾಥ ವ್ಯಕ್ತಿಯನ್ನು ಬಳ್ಳಾರಿಯ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ದಾಖಲು ಮಾಡಿದ್ದಾಗಿ ತಿಳಿದಿದೆ.

ಸಂಸದ ತರಾಟೆಗೆ:  ಪತ್ರಿಕೆಯಲ್ಲಿ ವರದಿ ಪ್ರಕಟವಾಗಿ ವಾರಗಳೆ ಕಳೆದರೂ ಈ ಬಗ್ಗೆ ತಕ್ಷಣಕ್ಕೆ ಸ್ಪಂದಿಸದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯ ಕಾರ್ಯವೈಖರಿಯನ್ನು ಸಂಸದ ಶಿವರಾಮಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.
`ಜಿಲ್ಲಾ ಕೇಂದ್ರದಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರವಿಲ್ಲದ್ದರಿಂದ ಸಮಸ್ಯೆಯಾಗಿದೆ. ವ್ಯಕ್ತಿಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ಸಾಕಷ್ಟು ಕಾನೂನು ತೊಡಕುಗಳಿರುವುದರಿಂದ ಅನಾಥ ವ್ಯಕ್ತಿಯ ಬಗ್ಗೆ ನಿರ್ಲಕ್ಷಿಸಲಾಗಿತ್ತು' ಎಂದು ಅಧಿಕಾರಿ ಸಮಜಾಯಿಷಿ ನೀಡಿದರು.

ಒಟ್ಟಾರೆಯಾಗಿ ಕಳೆದ ಎಂಟು ತಿಂಗಳಕ್ಕೂ ಹೆಚ್ಚು ಕಾಲದಿಂದ ಹೆಸರು, ಊರು ಯಾವೊಂದು ವಿವರ ನೀಡದೇ ಹಗಲು-ರಾತ್ರಿ ರಸ್ತೆ ಬದಿಯೇ ನಿಗೂಢವಾಗಿ ದಯಾನೀಯ ಜೀವನ ಸಾಗಿಸುತ್ತಿದ್ದ ವ್ಯಕ್ತಿಗೆ   ಬಳ್ಳಾರಿಯಲ್ಲಿ ಪುನರ್ವಸತಿ ದೊರೆತಿದೆ.
ಮನವಿ: ಅಧಿಕಾರಿಗಳ ಅಧಿಕೃತ ಮಾಹಿತಿ ಪ್ರಕಾರವೇ ಜಿಲ್ಲೆಯಲ್ಲಿ ಭಿಕ್ಷುಕರ ಸಂಖ್ಯೆ ಹತ್ತು ಸಾವಿರ ದಾಟಿದೆ. ಈ ಹಿನ್ನೆಲೆ ಕೊಪ್ಪಳದಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸಂಸದ ಎಸ್. ಶಿವರಾಮಗೌಡ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿ, ಅನಾಥ ವ್ಯಕ್ತಿಯ ಬಗ್ಗೆ `ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದ್ದ ವರದಿ ಗಮನಿಸಿ ಪುನರ್ವಸತಿ ಕೈಗೊಳ್ಳುವಂತೆ ಸಂಬಂಧಿತ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದ್ದೆ. ಆಗಲೆ ಜಿಲ್ಲೆಯಲ್ಲಿನ ಭಿಕ್ಷುಕರ ಸಮಸ್ಯೆ ಗಮನಕ್ಕೆ ಬಂತು. ಈ ಹಿನ್ನೆಲೆ ಸಂಬಂಧಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಸಂಬಂಧಿತ ಇಲಾಖೆಯ ಸಚಿವರು ಹಾಗೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಂಸದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT