ADVERTISEMENT

ಅರಿವಿನ ದೀವಿಗೆ ಹಚ್ಚಿದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 10:40 IST
Last Updated 6 ಮಾರ್ಚ್ 2011, 10:40 IST

ಕೊಪ್ಪಳ: ಗಂಗಾವತಿಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಭಾರತ ನಿರ್ಮಾಣ ಮಾಹಿತಿ ಆಂದೋಲನದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶನಿವಾರ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಯಿತು.ಚನ್ನಬಸವಸ್ವಾಮಿ ಕಲ್ಯಾಣ ಮಂಟಪದ ಬಳಿ ಶಾಸಕ ಪರಣ್ಣ ಮುನವಳ್ಳಿ ಜಾಥಾಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಮಾಹಿತಿ ಹಕ್ಕು ಕಾಯ್ದೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ. ಸಂಪೂರ್ಣ ಸ್ವಚ್ಛತಾ ಆಂದೋಲನ ಮತ್ತಿತರ ಯೋಜನೆಗಳನ್ನು ಕುರಿತು ಮಾಹಿತಿ ನೀಡುವ ಫಲಕಗಳನ್ನು ಹೊತ್ತು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಅರಿವಿನ ದೀವಿಗೆ ಹಚ್ಚಿದರು.

ಮಾಹಿತಿ ಮಹಾಪೂರ: ಸಾರ್ವಜನಿಕ ಮಾಹಿತಿ ಆಂದೋಲನದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳು ಜನಾಕರ್ಷಣೆಯ ಕೇಂದ್ರ ಬಿಂದುವಾಗಿವೆ.ಈ ವಸ್ತು ಪ್ರದರ್ಶನದಲ್ಲಿ ಕೃಷಿ, ರೇಷ್ಮೆ, ಎಸ್.ಜಿ.ಎಸ್.ವೈ., ಪಿಎಂಜಿಎಸ್, ಜಿಲ್ಲಾ ಕೈಗಾರಿಕಾ ಕೇಂದ್ರ, ತೋಟಗಾರಿಕೆ ಇಲಾಖೆ, ಜಿಲ್ಲಾ ಜಲಾನಯನ ಅಭಿವೃದ್ಧಿ, ಶಿಕ್ಷಣ, ಪಶು ಸಂಗೋಪನಾ, ಸಾಮಾಜಿಕ ಅರಣ್ಯ, ಮೀನುಗಾರಿಕಾ, ಸಮಾಜ ಕಲ್ಯಾಣ, ಖಾದಿ ಗ್ರಾಮೋದ್ಯೋಗ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ, ಭೂಸೇನಾ ನಿಗಮ, ಕರಕುಶಲ ನಿಗಮ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಸಹಕಾರ ಇಲಾಖೆ, ವಿದ್ಯುತ್ ಇಲಾಖೆ, ಈಶಾನ್ಯ

ರಾಜ್ಯ ರಸ್ತೆ ಸಾರಿಗೆ ಇಲಾಖೆ, ಸ್ತ್ರೀಶಕ್ತಿ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು, ಸಂಪೂರ್ಣ ಸ್ವಚ್ಛತಾ ಆಂದೋಲನ, ನಿರ್ಮಿತಿ ಕೇಂದ್ರ ಸೇರಿದಂತೆ ಒಟ್ಟು 36 ಮಳಿಗೆಗಳು ಮಾಹಿತಿ ಒದಗಿಸುತ್ತಿವೆ.ಮಾ. 5ರಿಂದ 7ರವರೆಗೆ ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆಯವರೆಗೆ ವಸ್ತುಪ್ರದರ್ಶನ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿರುತ್ತದೆ.

ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ: ಮಾಹಿತಿ ಆಂದೋಲನದ ಅಂಗವಾಗಿ ನಿರ್ಮಿಸಲಾಗಿರುವ ವಸ್ತು ಪ್ರದರ್ಶನ ಮಳಿಗೆಗಳನ್ನು ಸಂಸದ ಶಿವರಾಮಗೌಡ ಉದ್ಘಾಟಿಸಿದರು. ವಿವಿಧ ಮಳಿಗೆಯನ್ನು ವೀಕ್ಷಿಸಿದ ಅವರು ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಶಾಸಕ ಪರಣ್ಣ ಮುನವಳ್ಳಿ ಸಹ ಹಾಜರಿದ್ದರು.

ಆರೋಗ್ಯ ತಪಾಸಣೆ: ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಈ ಯೋಜನೆಯ ಲಾಭ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.