ADVERTISEMENT

ಇಂದಿನಿಂದ ರಂಭಾಪುರಿ ಶ್ರೀಗಳ ದರ್ಬಾರ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 5:45 IST
Last Updated 16 ಅಕ್ಟೋಬರ್ 2012, 5:45 IST

ಗಂಗಾವತಿ: ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ರಾಜ ದೇಶೀಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಅ.16ರಿಂದ 24ರವರೆಗೆ ನಗರದಲ್ಲಿ ಧರ್ವೋತ್ತೇಜಕ ದಸರಾ ಧರ್ಮ ಸಮ್ಮೇಳನ ನಡೆಯಲಿದೆ.

ಸಮ್ಮೇಳನಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಲಿದ್ದಾರೆ. ಮೊದಲ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ `ಸಂಜೀವಿನಿ~ ಎಂಬ ಗ್ರಂಥ ಬಿಡುಗಡೆ ಮಾಡಲಿದ್ದಾರೆ. `ಧರ್ಮಾಚರಣೆಯಲ್ಲಿ ಶ್ರದ್ಧೆ, ಅಭ್ಯುದಯ~ ಬಗ್ಗೆ ಕೊಟ್ಟೂರಿನ ಶಿವಾಚಾರ್ಯ ಉಪನ್ಯಾಸ ನೀಡುವರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಪಾಟೀಲ್, ಸಿ.ಎಂ. ಉದಾಸಿ, ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಪಾಲ್ಗೊಳ್ಳಲಿದ್ದಾರೆ. 

ಅ.17ರಂದು `ಸಿದ್ದಾಂತ ಶಿಖಾಮಣಿ ಸಾರ~ ಎಂಬ ಗ್ರಂಥವನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ವೀರಶೈವ-ಬಸವಣ್ಣ ಎಂಬ ಗ್ರಂಥವನ್ನು ಗುಲ್ಬರ್ಗ ವಿಶ್ವ ವಿದ್ಯಾಲಯದ ಕುಲಪತಿ ಈ.ಟಿ. ಪುಟ್ಟಯ್ಯ ಬಿಡುಗಡೆ ಮಾಡುವರು.  ಅ.18ರಂದು ಬಿಜೆಪಿಯ ರಾಷ್ಟ್ರೀಯ ನಾಯಕ ವೆಂಕಯ್ಯ ನಾಯ್ಡು ಆಗಮಿಸಲಿದ್ದಾರೆ, `ವಚನಗಳಲ್ಲಿ ಪಂಚಾಚಾರ್ಯರು~ ಎಂಬ ಗ್ರಂಥವನ್ನು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ ಇಂದುಮತಿ ಬಿಡುಗಡೆ ಮಾಡುವರು.

`ನಿರ್ಮಲ ನುಡಿ~ ಎಂಬ ಮಾಸ ಪತ್ರಿಕೆಯನ್ನು ಸಂಸದೆ ತೇಜಸ್ವಿನಿ ರಮೇಶ ಬಿಡುಗಡೆ ಮಾಡುವರು.  `ಧರ್ಮಾಚರಣೆಯಲ್ಲಿ ಮಹಿಳೆಯರ ಪಾತ್ರ~ ಎಂಬ ವಿಷಯದ ಬಗ್ಗೆ ತುಮಕೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಮೀನಾಕ್ಷಿ ಖಂಡಿಮಠ ಉಪನ್ಯಾಸ ನೀಡುವರು.

ಅ.19ರಂದು `ಪಂಚಾಚಾರ್ಯ ಪ್ರಭಾ~ವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಬಿಡುಗಡೆ ಮಾಡುವರು. `ವೇದಾಗಮಗಳಲ್ಲಿ ವಚನ ಸಾಹಿತ್ಯ~ ಎಂಬ ಕೃತಿಯನ್ನು ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಬಿ.ವಿ. ಪಾಟೀಲ್ ಬಿಡುಗಡೆ   ಮಾಡುವರು.  `ವೀರಶೈವ ಧರ್ಮದಲ್ಲಿ ಪಂಚಯಜ್ಞಗಳು~ ಎಂಬ ವಿಷಯದ ಬಗ್ಗೆ ಮೈಸೂರಿನ ಅರಮನೆ ಜಪದಕಟ್ಟೆಯ ಡಾ. ಮುಮ್ಮಡಿ ಚಂದ್ರಶೇಖರ  ಶಿವಾಚಾರ್ಯರು ಉಪನ್ಯಾಸ ನೀಡಲಿದ್ದಾರೆ. ಸಚಿವ ರೇವೂ ಬೆಳಮಗಿ ನಾಯಕ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.

ಅ.20ಕ್ಕೆ ಚಿಕ್ಕಮಗಳೂರು ಜಿಲ್ಲೆ ಭಾಸಾಪುರದ ಬಿ.ಎಂ. ಭೋಜೆಗೌಡರಿಗೆ `ರಂಭಾಪುರಿ ಯುವಶ್ರೀ~                ಮತ್ತು ಅ. 21ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಜಿ. ಬಂಡಿ ಅವರಿಗೆ `ವೀರಶೈವ ಸಿರಿ~ ಎಂಬ ಪ್ರಶಸ್ತಿ ಪ್ರಧಾನ  ಮಾಡಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT