ADVERTISEMENT

ಇಲಾಖೆ ಜಾಗ ತೆರವಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 9:25 IST
Last Updated 17 ಮಾರ್ಚ್ 2012, 9:25 IST

ಕುಷ್ಟಗಿ: ಪಟ್ಟಣದ ಹೃದಯ ಭಾಗದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಗೆ ಹೊಂದಿಕೊಂಡಿರುವ ಆಸ್ತಿಗೆ ಸಂಬಂಧಿಸಿದಂತೆ ಮಾಲೀಕತ್ವದ ಕುರಿತ ವಿವಾದ ಇಲಾಖೆ ಮತ್ತು ಪುರಸಭೆ ನಡುವೆ ಮುಂದುವರೆದಿದ್ದು, ಸದರಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಪುರಸಭೆ ಅಲ್ಲಿನ ಗಿಡಮರಗಳನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದು ಶುಕ್ರವಾರ ಸಂಜೆ ಕಂಡುಬಂದಿತು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ರ ಮತ್ತು ಪುರಸಭೆ ಸಿಬ್ಬಂದಿಯ ಉಸ್ತುವಾರಿಯಲ್ಲಿ ಸದರಿ ನಿವೇಶನದಲ್ಲಿದ್ದ ತೆಂಗು ಮತ್ತಿತರೆ ಗಿಡಗಳನ್ನು ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಿ ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಅಡಿಪಾಯ ತೆಗೆಯುವ ಕೆಲಸ ಭರದಿಂದ ಸಾಗಿತ್ತು. ಪುರಸಭೆ ಸಿಬ್ಬಂದಿ ಮತ್ತು ಸದಸ್ಯ ಜಿ.ಕೆ.ಹಿರೇಮಠ ಮತ್ತಿತರರು ಸ್ಥಳದಲ್ಲಿದ್ದರು.

ಈ ಮಧ್ಯೆ ತೆರವು ಕಾರ್ಯಾಚರಣೆ ಬಗ್ಗೆ ವಿವರಿಸಿದ ತೋಟಗಾರಿಕೆ ಇಲಾಖೆ ಕೊಪ್ಪಳ ಜಿಲ್ಲೆ ಉಪನಿರ್ದೇಶಕ ಎಚ್.ಬಿ.ವಸಂತಪ್ಪ, 1947-75ನೇ ವರ್ಷದಿಂದಲೂ ಸದರಿ ಆಸ್ತಿ ಇಲಾಖೆ ವಶದಲ್ಲಿದೆ, ಆದರೆ ಸದರಿ ಜಾಗೆಯಲ್ಲಿದ್ದ ಗಿಡಮರಗಳನ್ನು ಉರುಳಿಸಿ ತೆರವು ಕಾರ್ಯಾಚರಣೆ ನಡೆಸಿರುವುದನ್ನು ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಇಲಾಖೆಯ ಆಸ್ತಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ದೂರು ನೀಡಲು ಸಹಾಯಕ ನಿರ್ದೇಶಕರಿಗೆ ಸೂಚಿಸಿರುವುದಾಗಿ ಸ್ಪಷ್ಟಪಡಿಸಿದರು.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಜಿ.ಕೆ.ಹಿರೇಮಠ, ತೋಟಗಾರಿಕೆ ಕಚೇರಿ ಹೊರತುಪಡಿಸಿ ಉಳಿದ ಜಾಗೆ ಪುರಸಭೆಗೆ ಸೇರಿದೆ, ಅಗತ್ಯ ದಾಖಲೆಗಳಿದ್ದರೆ ಒದಗಿಸುವಂತೆ ಇಲಾಖೆಗೆ ಹೇಳಿದ್ದರೂ ದಾಖಲೆ ಒದಗಿಸುವಲ್ಲಿ ಇಲಾಖೆ ವಿಫಲವಾಗಿದೆ.. ಹಾಗಾಗಿ ಸದರಿ ಸ್ಥಳದಲ್ಲಿ ಬಸವ ಪುತ್ಥಳಿ ಸ್ಥಾಪನೆಗೊಳಿಸಬೇಕಿರುವುದರಿಂದ ತೆರವು ಕೆಲಸ ನಡೆಸಿರುವುದಾಗಿ ಹೇಳಿದರು.

ಆದರೆ ತೆರವು ಕಾರ್ಯಾಚರಣೆ ಯಾರಿಂದ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ ಅದನ್ನು ಲೋಕೋಪಯೋಗಿ ಇಲಾಖೆ ನಡೆಸುತ್ತಿದೆ, ಇಲಾಖೆ ಎಂಜಿನಯರ್‌ರು, ಬಸವ ಸಮಿತಿಯವರು ಮತ್ತು ತಾವು ಸ್ಥಳದಲ್ಲಿರುವುದಾಗಿ ಜಿ.ಕೆ.ಹಿರೇಮಠ ಹೇಳಿದರು. ಸದರಿ ಆಸ್ತಿ ತನ್ನದೇ ಎಂದು ವಾದಿಸುತ್ತಿರುವ ಪುರಸಭೆ ಆಸ್ತಿದಾಖಲೆಯಲ್ಲಿಯೂ ಸೇರಿಸಿದ್ದು ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಬಗ್ಗೆ ಹಿಂದೆ ಸಾಮಾನ್ಯ ಸಭೆಯಲ್ಲಿನಿರ್ಣಯ ಅಂಗೀಕರಿಸಿತ್ತು. ಪಟ್ಟಣದಲ್ಲಿ ಬಸವ ಪುತ್ಥಳಿ ಸ್ಥಾಪಿಸಬೇಕೆಂಬುದು ಇಲ್ಲಿಯ ಜನರ ಬಹುದಿನಗಳ ಬೇಡಿಕೆಯಾಗಿದೆ, ಆದರೆ ಜಾಗೆ ವಿಷಯದಲ್ಲಿ ಗೊಂದಲ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.