ADVERTISEMENT

ಉಡಿ ತುಂಬುವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 10:09 IST
Last Updated 13 ಏಪ್ರಿಲ್ 2013, 10:09 IST

ಹನುಮಸಾಗರ:  ಇಲ್ಲಿನ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರೀಮಠದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬೆಳಿಗ್ಗೆ ಗ್ರಾಮದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ನೂರಾರು ಮುತ್ತೈದೆಯರಿಗೆ ಚನ್ನಬಸವರಾಜ ಹಾಗೂ ವಿಶ್ವನಾಥ ಕನ್ನೂರ ಇವರ ಕುಟುಂಬದ ಸುಮಂಗಲೆಯರು ಪ್ರತಿವರ್ಷದಂತೆ ಫಲತಾಂಬೂಲಗಳಿಂದ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟರು.

ಸಾಯಂಕಾಲ ನಡೆದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ವಿಜಯಮಹಾಂತ ಶಿವಯೋಗಿಗಳು ಮೈಸೂರುಮಠ ಇವರು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಹಾಲಕೇರಿಯ ಅನ್ನದಾನ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಿದ್ದರು.

ಅಮೀನಗಡದ ಶಂಕರರಾಜೇಂದ್ರ ಮಹಾಸ್ವಾಮಿಗಳು, ,ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಅಡ್ನೂರ ಪಂಚಾಕ್ಷರ ಶಿವಾಚಾರ್ಯರು, ಯಲಬುರ್ಗಾದ ಬಸವಲಿಂಗಶಿವಾಚಾರ್ಯ ಮಹಾಸ್ವಾಮಿಗಳು, ಹನುಮಸಾಗರದ ಹಜರತ್ ಅಬ್ದುಲ್‌ಖಾದರ್ ಹುಸೇನಿ ಅರೀಫುಲ್ ಖಾದ್ರಿ, ಹುಣಿಸ್ಯಾಳದ ಶಾಂತವೀರಸ್ವಾಮಿಗಳು, ಕಂಪ್ಲಿಯ ಕಲ್ಯಾಣಸ್ವಾಮಿಗಳು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ನಿವೃತ್ತ ಪ್ರಾಚಾರ್ಯ ಕರಿಸಿದ್ದಪ್ಪ ಕನ್ನೂರ 12 ನೇ ಶತಮಾನದ ಶರಣರ ಸಂದೇಶ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಏ.11ರಂದು ಬೆಳಿಗ್ಗೆ 5 ಗಂಟೆಗೆ ಅಯ್ಯಾಚಾರ ಕಾರ್ಯಕ್ರಮ, ಉಚಿತ ಸಾಮೂಹಿಕ ವಿವಾಹ, ಮಹಾಗಣಾರಾಧನೆ ನಡೆಯುವುದು. ಸಾಯಂಕಾಲ ಬೀಳಗಿ ಭಕ್ತರಿಂದ ತೇರಿನ ಹಗ್ಗದ ಮೆರವಣಿಗೆ, ಕರಡಿ ಮಜಲಿನ ಸೇವಾ ಸಕಲ ವಾದ್ಯ ವೈಭವಗಳೊಂದಿಗೆ ಕರಿಸಿದ್ದೇಶ್ವರ ರಥೋತ್ಸವ ಜರುಗಲಿದೆ. ಬಳಿಕ ಧರ್ಮೋತ್ತೇಜಕ ಮಹಾಸಭೆ ನಡೆಯಲಿದೆ.

 ಗಂಗಾವತಿ ಕಲ್ಮಠದ ಡಾ.ಕೊಟ್ಟೂರು ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಕಮತಗಿಯ ಹುಚ್ಚೇಶ್ವರ ಮಹಾಸ್ವಾಮಿಗಳು, ಕರಿಬಸವ ಶಿವಾಚಾರ್ಯರು, ಜೀಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯರು, ಸವಡಿಯ ಸಂಗನಬಸಪ್ಪ ಮಂಗಳೂರ ಇತರರು ಉಪಸ್ಥಿತರಿರುವರು.

ಇಲಕಲ್ಲಿನ ಲಾಲಹುಸೇನ ಕಂದಗಲ್ ಅವರಿಂದ ಸರ್ವಧರ್ಮಗಳ ಭಾವೈಕ್ಯತೆಯ ಸಂದೇಶ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.