ADVERTISEMENT

ಎಲ್ಲವೂ ಕ್ಷೇಮ... ಎಲ್ಲರೂ ಕ್ಷೇಮ!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 8:20 IST
Last Updated 16 ಮಾರ್ಚ್ 2011, 8:20 IST
ಎಲ್ಲವೂ ಕ್ಷೇಮ... ಎಲ್ಲರೂ ಕ್ಷೇಮ!
ಎಲ್ಲವೂ ಕ್ಷೇಮ... ಎಲ್ಲರೂ ಕ್ಷೇಮ!   

ಕೊಪ್ಪಳ: ಬೆಳಿಗ್ಗೆ 11.20 ಗಂಟೆಗೆ ಆರಂಭಗೊಂಡ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ಮುಗಿದಿದ್ದು ಸರಿಯಾಗಿ 12.30 ಗಂಟೆಗೆ! ಒಟ್ಟು 35 ಇಲಾಖೆಗಳಡಿ ಕೈಗೊಂಡ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆಯನ್ನು ಈ ಅವಧಿಯಲ್ಲಿ ಮುಗಿಸುವ ಮೂಲಕ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನೆ ಎಂಬ ಪ್ರಕ್ರಿಯೆಗೆ ಮಂಗಳವಾರ ಹೊಸ ಭಾಷ್ಯ ಬರೆಯಿತು!

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪ್ರತಿನಿತ್ಯ ದೂರು ಬರುತ್ತವೆ. ಜಿಲ್ಲೆಯ ಒಂದಿಲ್ಲೊಂದು ಗ್ರಾಮದಲ್ಲಿ, ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಯುತ್ತಿರುವುದು ಸಾಮಾನ್ಯ. ಆದರೆ, ಇಂತಹ ಮಹತ್ವದ ಯೋಜನೆ ಕುರಿತು ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಚರ್ಚೆ ಮಾಡುವ ಮೂಲಕ ಜಿಲ್ಲಾ ಪಂಚಾಯಿತಿ ನೂತನ ದಾಖಲೆ ಸ್ಥಾಪಿಸಿತು.

ಕಳೆದ ಬಾರಿ ಬಿದ್ದ ಭಾರಿ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಮಣ್ಣು ಕೊಚ್ಚಿಕೊಂಡು ಹೋಗಿದೆ. ಅಲ್ಲದೆ, ಜಲಾನಯನ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ, ಈ ಇಲಾಖೆಯ ಪ್ರಗತಿ ಪರಿಶೀಲನೆ ಕೇವಲ 27 ಸೆಕೆಂಡ್‌ಗಳಲ್ಲಿ ಖತಂ!ಪ್ರಮುಖ ಇಲಾಖೆಗಳಾದ ಸಣ್ಣ ನೀರಾವರಿ, ಗ್ರಾಮೀಣ ನೀರು ಸರಬರಾಜು ಯೋಜನೆ ಕುರಿತಂತೆ ಚರ್ಚಿಸಲು ಆಯಾ ಇಲಾಖೆಗಳ ಅಧಿಕಾರಿಗಳೇ ಸಭೆಗೆ ಹಾಜರಾಗಿರಲಿಲ್ಲ. ಇನ್ನು ಉಳಿದ ಇಲಾಖೆ ಬಗ್ಗೆ ಅಧ್ಯಕ್ಷ-ಉಪಾಧ್ಯಕ್ಷರೇ ಚರ್ಚೆ ನಡೆಸಲು ಆಸಕ್ತಿ ತೋರದೆ ಸಭೆಯನ್ನು ಬರ್ಖಾಸ್ತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.