ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 8:44 IST
Last Updated 16 ಮಾರ್ಚ್ 2018, 8:44 IST

ಕುಷ್ಟಗಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಮುಖ್ಯಶಿಕ್ಷಕರು ಶ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಹನುಮಂತಪ್ಪ ಹೇಳಿದರು.

ಇಲ್ಲಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಫಲಿತಾಂಶ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿದ್ದು, ಈ ಬಗ್ಗೆ ಈ ಶೈಕ್ಷಣಿಕ ವರ್ಷದಲ್ಲಿ ವಿಷಯಾಧಾರಿತ ತರಬೇತಿ, ಸಮಾವೇಶಗಳನ್ನು ನಡೆಸಲಾಗಿದೆ. ಬೋಧನೆಯಲ್ಲಿಯೂ ಅನೇಕ ರೀತಿಯ ಬದಲಾವಣೆಗಳನ್ನು ತರಲಾಗಿದೆ. ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸಲು ಪ್ರಯತ್ನಿಸುವಂತೆ ಹೇಳಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ನಾಯಕ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ, ತಾಲ್ಲೂಕು ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕ ವಿ.ಬಿ.ಉಪ್ಪಿನ, ಪ್ರೌಢಶಾಲೆಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತಗೌಡ ಮೇಟಿ, ಈಶಪ್ಪ ತಳವಾರ ಮಾತನಾಡಿದರು. ತಾಲ್ಲೂಕು ನೋಡಲ್‌ ಅಧಿಕಾರಿ ಎಂ.ಎಸ್‌.ತಮ್ಮಣ್ಣವರ ನಿರೂಪಿಸಿದರು.

ದೂರವಾಣಿ ಮೂಲಕ ಸಮಸ್ಯೆ ಪರಿಹಾರ: ಎಲ್ಲ ವಿಷಯಗಳ ಕಠಿಣ ಸಮಸ್ಯೆಗಳನ್ನು ದೂರವಾಣಿ ಮೂಲಕ ಪರಿಹರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ಮಾರ್ಚ್‌ 17ರಂದು ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ 08536–267043 ದೂರವಾಣಿ ಸಂಖ್ಯೆಗೆ ವಿದ್ಯಾರ್ಥಿಗಳು ಕರೆ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸೂಚಿಸಲಾಗಿದೆ. ಬಸವರಾಜ ಮೇಟಿ (ಕನ್ನಡ), ಮಹಾಂತೇಶ ವಸ್ತ್ರದ (ಇಂಗ್ಲಿಷ್‌), ಶಿವಾನಂದ ಹಿರೇಮಠ (ಹಿಂದಿ). ವೀರೇಶಪ್ಪ (ಗಣಿತ), ಶಿವಯೋಗಪ್ಪ (ವಿಜ್ಞಾನ) ಮತ್ತು ಹನುಮಂತಪ್ಪ ತೋಟದ (ಸಮಾಜ) ಇವರು ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.