ಕೊಪ್ಪಳ: ಇತರೆ ಶಾಲಾ ಕಾಲೇಜುಗಳಿಗೆ ನೀಡುವ ರೀತಿಯಲ್ಲಿ ಬೇಸಿಗೆಯಲ್ಲಿ ಅಭ್ಯಾಸ ನಿರತ ಐಟಿಐ ಕಾಲೇಜ್ ವಿದ್ಯಾರ್ಥಿಗಳಿಗೂ ರಜೆ ನೀಡುವಂತೆ ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ಕಾರ್ಯಕರ್ತರು ಶನಿವಾರ ಇಲ್ಲಿಯ ತಹಸೀಲ್ದಾರರ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟಿಸಿದ ಪ್ರಸಂಗ ನಡೆಯಿತು.
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಸೀಲ್ದಾರರ ಕಚೇರಿ ತಲುಪಿದ ಮುಖಂಡರು, ಕಾರ್ಯಕರ್ತರು, ಅಧಿಕ ತಾಪಮಾನದಿಂದಾಗಿ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಅದರಿಂದ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯುವುದಕ್ಕೆ ಅಡ್ಡಿಯಾಗಿದೆ. ಅವರ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗುತ್ತಿದೆ.ಅದರಿಂದ ಬೇಸಿಗೆಯಲ್ಲಿ ಐಟಿಐ ಕಾಲೇಜ್ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇಸಿಗೆಯಲ್ಲಿ ರಜೆ ನೀಡುವಂತೆ ಆಗ್ರಹಿಸಿದರು.
ಅಲ್ಲದೇ ಬೇಡಿಕೆ ಈಡೇರದಿದ್ದರೆ ಜಿಲ್ಲೆಯ ಎಲ್ಲ ತಹಸೀಲ್ದಾರರ ಕಚೇರಿ ಮುಂದೆ ಹಾಗೂ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರದಿಂದ ಧರಣಿ ನಡೆಸುವುದಾಗಿ ತಹಸೀಲ್ದಾರರಿಗೆ ನೀಡಿದ ಮನವಿಯಲ್ಲಿ ಬೆದರಿಕೆ ಹಾಕಿದ್ದಾರೆ.
ಐಟಿಐ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಬೇಕು, ಪ್ರತಿ ತಿಂಗಳು ಸ್ಟೈಫಂಡ್ ನೀಡಬೇಕು, ಕೇಂದ್ರ ಸರ್ಕಾರಿಂದ ಪ್ರಮಾಣ ಪತ್ರ ದೊರೆಯಬೇಕು ಮತ್ತು ಕಾಲೇಜ್‌ಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಅವರು ಒತ್ತಾಯಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಗುರುರಾಜ ದೇಸಾಯಿ, ಉಪಾಧ್ಯಕ್ಷ ಅಮರೇಶ ಕಡಗದ, ಸುಂಕಪ್ಪ ಗದಗ, ರಾಘವೇಂದ್ರ, ನಾಗರಾಜ, ಶಿವರಾಜ ಮತ್ತಿತರರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.