ADVERTISEMENT

ಒಬ್ಬರಿಗೆ 3 ಎಪಿಕ್ ಕಾರ್ಡ್: ಗೊಂದಲ

ಗಂಗಾವತಿ: ಮತದಾರರ ಪಟ್ಟಿಯಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 9:52 IST
Last Updated 10 ಏಪ್ರಿಲ್ 2018, 9:52 IST

ಗಂಗಾವತಿ: ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 189ರ ವಾರ್ಡ್‌ 26ರ ಗುಂಡಮ್ಮ ಕ್ಯಾಂಪಿನ ಗೃಹಿಣಿ ಶಫಿಯಾ ಬೇಗಂ ಅವರಿಗೆ ಒಂದೇ ವಿಳಾಸದ ಮೇಲೆ ಮೂರು ಮತದಾರರ ಕಾರ್ಡ್‌ ನೀಡಲಾಗಿದೆ.

’ಇದೇ ಮತಗಟ್ಟೆಯಲ್ಲಿ ಗೋಪಾಲ ಸಿಂಗ್ ಮತ್ತು ಗೀತಾಬಾಯಿ ಎಂಬ ಇಬ್ಬರು ಮತದಾರರು ಬೇರೆಡೆ ವಲಸೆ ಹೋಗಿದ್ದಾರೆ. ಬೇರೆ ಮತಗಟ್ಟೆಯಲ್ಲಿ ಅವರ ಹೆಸರು ನೋಂದಾಯಿಸಲಾಗಿದೆ. ಆದರೆ, ಇದೇ ಮತಗಟ್ಟೆಯಲ್ಲಿ ಅವರ ಹೆಸರು ಮುಂದುವರಿಸಲಾಗಿದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ವೀರೇಶ ಬಲ್ಕುಂದಿ ಆರೋಪಿಸಿದ್ದಾರೆ.

ಇದೇ ಮತಗಟ್ಟೆಯ ಮತದಾರ ಸಂಖ್ಯೆ ಐಡಬ್ಲೂಎ 2982171 ಹಾಗೂ 2982163ನೇ ಸಂಖ್ಯೆ ಮತದಾರ ಭಾವಚಿತ್ರ ಒಂದೇ ಆಗಿವೆ.  ಇದೇ ಮತಗಟ್ಟೆಯ ಸಂಖ್ಯೆ 3218773ರಲ್ಲಿ ಒಬ್ಬ ಮಹಿಳಾ ಮತದಾರರ ಹೆಸರು ಶಜಿಯಾ ತರುನ್ನಂ ಎಂದು ಬರೆಯಲಾಗಿದೆ. ಇದೇ ಪುಟದಲ್ಲಿ ಮತದಾರ ಸಂಖ್ಯೆ 3218732 ಅದೇ ಮಹಿಳೆಯನ್ನು ಶಾಜೀಯಾ ಎಂದು ಹೆಸರಿಸಲಾಗಿದೆ.

ADVERTISEMENT

’ಒಂದೇ ಮತಗಟ್ಟೆಯಲ್ಲಿ 80ಕ್ಕೂ ಹೆಚ್ಚು ಲೋಪ ಕಂಡಿವೆ. ‘ಕ್ಷೇತ್ರದಲ್ಲಿ ಪ್ರತಿ ಮತಗಟ್ಟೆಯಲ್ಲಿ ಇಂತಹ ಸಾಕಷ್ಟು ಲೋಪ ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಇದು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ’ ಎಂದು ವಾರ್ಡಿನ ನಾಗರಿಕ ಸಂತೋಷ್ ಛಲವಾದಿ ಆತಂಕ ವ್ಯಕ್ತಪಡಿಸಿದ್ದಾರೆ.

’ರಾಜಕಾರಣಿಗಳು ದುರುದ್ದೇಶದಿಂದ ಈ ಅಕ್ರಮ ನಡೆಸಿರುವ ಸಾಧ್ಯತೆಯಿದೆ. ಕೆಲವು ಅಧಿಕಾರಿಗಳು ಸಾಥ್ ಕೊಟ್ಟಿರುವ ಅನುಮಾನ ಇದೆ. ಚುನಾವಣಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಬೇಕು’ ಎಂದು ಹಿರಿಯ ನಾಗರಿಕ ಹೋರಾಟ ಸಮಿತಿಯ ಹಿರಿಯ ಸದಸ್ಯ ಕೃಷ್ಣಮೂರ್ತಿ ಆಚಾರ್ ಒತ್ತಾಯಿಸಿದ್ದಾರೆ.

**

ಹೆಸರು ಸೇರಿಸುವ, ತೆಗೆದು ಹಾಕುವ ಮತ್ತು ತಿದ್ದುಪಡಿ ಮಾಡಲು ಏ.14ರವರೆಗೂ ಅವಕಾಶವಿದೆ. ಈ ಸಮಯದಲ್ಲಿ ಇಂತಹ ಲೋಪ ಸರಿಪಡಿಸುತ್ತೇವೆ – ಡಾ.ರವಿ ಎಂ. ತಿರ್ಲಾಪುರ ಚುನಾವಣಾಧಿಕಾರಿ, ಗಂಗಾವತಿ.

**

–ಎಂ.ಜೆ. ಶ್ರೀನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.