ADVERTISEMENT

ಒಳ ಮೀಸಲಾತಿಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:10 IST
Last Updated 7 ಫೆಬ್ರುವರಿ 2012, 9:10 IST

ಕೊಪ್ಪಳ: ಪರಿಶಿಷ್ಟ ಜಾತಿಯ ಮಾದಿಗ ಸಮಾಜದವರಿಗೆ ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಇಲ್ಲಿ ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸಿದರು.

ಈ ಸಂಬಂಧ ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ಹುಸೇನಪ್ಪ ಮಾದಿಗ ಮಾತನಾಡಿ, ಪರಿಶಿಷ್ಟರಿಗೆ ಈಗಿರುವ ಮೀಸಲಾತಿಯಲ್ಲಿ ಮಾದಿಗ ಸಮಾಜಕ್ಕೆ ಅನುಕೂಲವಾಗುವ ಸಲುವಾಗಿ ಎ.ಬಿ.ಸಿ ಮತ್ತು ಡಿ ಎಂಬುದಾಗಿ ವರ್ಗೀಕರಿಸಬೇಕು. ಈ ಸಂಬಂಧ ಪ್ರಸಕ್ತ ಅಧಿವೇಶನದಲ್ಲಿಯೇ ಸೂಕ್ತ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಮಾಹಿತಿ ನೀಡುವಂತೆಯೂ ಒತ್ತಾಯಿಸಿದರು.

ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ಕಳೆದ ಜ. 22ರಂದು ಮಾದಿಗ ಕಾಲೋನಿಗೆ ಕೆಲವರು ನುಗ್ಗಿ ದೌರ್ಜನ್ಯ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಬಹಿಷ್ಕಾರಕ್ಕೆ ಒಳಗಾಗಿರುವ ಗ್ರಾಮದ 63 ಕುಟುಂಬಗಳಿಗೆ ಜಮೀನು, ವಸತಿ, ಉದ್ಯೋಗ, ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಒಟ್ಟು 8 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಅಧ್ಯಕ್ಷ ಗುಂಡಪ್ಪ ಬಡಗಿ, ಉಪಾಧ್ಯಕ್ಷ ರಾಮಣ್ಣ ಗುಡಿ, ಯಲಬುರ್ಗಾ ತಾಲ್ಲೂಕು ಘಟಕದ ಅಧ್ಯಕ್ಷ ಹುಲುಗಪ್ಪ ಹಿರೇಮನಿ, ಕೊಪ್ಪಳ ತಾಲ್ಲೂಕು ಅಧ್ಯಕ್ಷ ಯಲ್ಲಪ್ಪ ಹಳೇಮನಿ ಧರಣಿಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.